
ಬಂಟ್ವಾಳ: ಕಾರವಾರ – ಮಂಗಳೂರು – ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಸಹಜ ಹೆರಿಗೆ ಮಾಡಿಸಿದ ಘಟನೆ ರವಿವಾರ ಮುಸ್ಸಂಜೆ ಬಂಟ್ವಾಳ ಸಮೀಪದ ಬಿ.ಸಿ.ರೋಡ್ ಬಳಿ ನಡೆದಿದೆ.
ಮಂಗಳೂರು ಜಂಕ್ಷನ್ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿತ್ತು. ರೈಲು ಬಿ.ಸಿ.ರೋಡ್ ತಲುಪಿದಾಗ ಗರ್ಭಿಣಿಗೆ ತೀವ್ರ ರಕ್ತಸ್ರಾವವೂ ಆಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮೈಸೂರು ಮೂಲದ ಮಹಿಳೆ ಮಂಗಳೂರಿನಲ್ಲಿ ರೈಲು ಹತ್ತಿದ್ದು ಸ್ವಲ್ಪ ಮುಂದೆ ಬರುವ ವೇಳೆಗೆ ಇವರಿಗೆ ಹೆರಿಗೆಯ ನೋವು ಬಂದಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಉಪಚರಿಸಿದ್ದಲ್ಲದೆ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ತಕ್ಷಣ ಸ್ಪಂದಿಸಿ ಬಿ.ಸಿ.ರೋಡಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ, ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿದೆ. ಕೂಡಲೇ ಆಂಬ್ಯಲೆನ್ಸ್ ಮೂಲಕ ಮಗು ಹಾಗೂ ತಾಯಿಯನ್ನು ವೈದ್ಯರ ತಂಡ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದರೂ ಕೂಡ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಬಿ.ಸಿ.ರೋಡಿಗೆ 7.20 ಕ್ಕೆ ಬಂದಿದ್ದ ರೈಲು ಸುಮಾರು ಒಂದು ತಾಸುಗಳ ಕಾಲ ಬಿ.ಸಿ.ರೋಡಿನ ನಿಲ್ದಾಣದಲ್ಲಿ ನಿಂತು, ಹೆರಿಗೆಯಾದ ಬಳಿಕ ಅಂದರೆ 8.20 ಕ್ಕೆ ಬಿ.ಸಿ.ರೋಡಿನಿಂದ ತೆರಳಿದೆ. ಬಸುರಿ ಮಹಿಳೆಯೋರ್ವಳ ಹೆರಿಗೆಗಾಗಿ ರೈಲು ನಿಲ್ದಾಣಕ್ಕೆ ವೈದ್ಯರ ತಂಡವನ್ನು ಕರೆದುಕೊಂಡು ಬರುವಂತೆ ಕಲ್ಲಡ್ಕ ದ ಅಂಬ್ಯುಲೆನ್ಸ್ ವಾಹನದ ಚಾಲಕ ಲೋಕೇಶ್ ಅವರಿಗೆ ಪೋನ್ ಬಂದ ತಕ್ಷಣವೇ ಕೇವಲ ಮೂರು ನಿಮಿಷದಲ್ಲಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿಕೊಂಡು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.
ವೈದ್ಯರು ಹೆರಿಗೆ ಮಾಡಿಸಿದ ಕೂಡಲೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನದಲ್ಲಿ ಹಾಗೂ ತಾಯಿಯನ್ನು ಖಾಸಗಿ ಆಸ್ಪತ್ರೆಯ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಕೈಕಂಬದ ಸಮಾದ್ , ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಸಾರ್ವಜನಿಕರು ಮಹಿಳೆಯ ಹೆರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ. ಮಂಗಳೂರು ರೈಲ್ವೆ ಇಲಾಖೆಯ ಪೋಲೀಸರ ತಂಡ ಕೂಡ ಆಗಮಿಸಿದ್ದು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು, ಹೆಚ್ಚಿನ ವಿವರ ನೀಡಲಿದ್ದಾರೆ. ಪೊನ್ನಮ್ಮ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿ ಎಂದು ಹೇಳಲಾಗುತ್ತಿದೆ.
