
ಜೈಪುರ: ರಾಜಸ್ಥಾನದ ಸರ್ದಾರ್‌ಶಹರ್ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಹವಾಮಾನ ಹಠಾತ್ತನೆ ಬದಲಾಗಿದ್ದರಿಂದ ಪ್ರಕೃತಿಯ ವಿಚಿತ್ರ ವಿಸ್ಮಯವೊಂದು ಕಂಡುಬಂದಿದೆ. ಮಧ್ಯಾಹ್ನದ ಉರಿ ಬಿಸಿಲಿನ ವೇಳೆಯಲ್ಲೇ ಇಡೀ ಆಕಾಶವನ್ನು ದಟ್ಟವಾದ ಧೂಳಿನ ಮೋಡಗಳು ಆವರಿಸಿದ್ದರಿಂದ, ಹಗಲಿನಲ್ಲೇ ರಾತ್ರಿಯಂತಹ ಕತ್ತಲೆ ಆವರಿಸಿ ಜನರನ್ನು ಆತಂಕಕ್ಕೀಡು ಮಾಡಿದೆ.
ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಬೀಸಿದ ಭೀಕರ ಮತ್ತು ಬಲವಾದ ಬಿರುಗಾಳಿಯು ಇಡೀ ನಗರವನ್ನು ಧೂಳಿನಮಯವಾಗಿಸಿತು. ಧೂಳಿನ ಮೋಡ ಎಷ್ಟು ದಟ್ಟವಾಗಿತ್ತೆಂದರೆ, ರಸ್ತೆಯಲ್ಲಿ ಕೆಲವು ಮೀಟರ್ ದೂರದಲ್ಲಿರುವ ವಸ್ತುಗಳು ಹಾಗೂ ವಾಹನಗಳು ಕಾಣಿಸದಷ್ಟು ಗೋಚರತೆ (Visibility) ಸಂಪೂರ್ಣ ಕುಸಿದಿತ್ತು. ಇದರಿಂದಾಗಿ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಚಾಲಕರು ಅನಿವಾರ್ಯವಾಗಿ ಮಧ್ಯಾಹ್ನದ ವೇಳೆಯಲ್ಲೇ ತಮ್ಮ ವಾಹನಗಳ ಹೆಡ್‌ಲೈಟ್‌ಗಳನ್ನು ಆನ್ ಮಾಡಿಕೊಂಡು ಅತ್ಯಂತ ಜಾಗರೂಕತೆಯಿಂದ ಸಾಗಬೇಕಾಯಿತು.
ಹವಾಮಾನದಲ್ಲಾದ ಈ ದಿಢೀರ್ ಬದಲಾವಣೆಯಿಂದಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಬಿರುಗಾಳಿ ಮತ್ತು ಕಣ್ಣು ಬಾಯಿ ಮುಚ್ಚಿಸುವಂತೆ ಇದ್ದ ಧೂಳಿನಿಂದ ರಕ್ಷಣೆ ಪಡೆಯಲು ಜನರು ಓಡೋಡಿ ಹೋಗಿ ಅಂಗಡಿ ಮುಂಗಟ್ಟುಗಳು ಹಾಗೂ ಸುರಕ್ಷಿತ ಕಟ್ಟಡಗಳ ಆಶ್ರಯ ಪಡೆದರು. ಈ ಭೀಕರ ಚಂಡಮಾರುತದ ಹೊಡೆತಕ್ಕೆ ಹಲವಾರು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಹಾಗೂ ಸಂಪರ್ಕ ಲೈನ್‌ಗಳು ಹಾನಿಗೊಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳಿಂದ ತೀವ್ರವಾದ ಸುಡು ಬಿಸಿಲು ಮತ್ತು ಉಷ್ಣಗಾಳಿಯಿಂದ ಜರ್ಝರಿತರಾಗಿದ್ದ ರಾಜಸ್ಥಾನದ ಜನರಿಗೆ ಈ ಹವಾಮಾನ ಬದಲಾವಣೆ ತಾಪಮಾನ ಇಳಿಕೆಯ ನಿರಾಳತೆ ತಂದಿದೆಯಾದರೂ, ಧೂಳಿನ ಬಿರುಗಾಳಿ ಮಾತ್ರ ದೈನಂದಿನ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಸದ್ಯ ಇಡೀ ಸರ್ದಾರ್ಶಹರ್ ಆಕಾಶವು ಧೂಳಿನ ಬೃಹತ್ ಮೋಡಗಳಿಂದ ಮುಚ್ಚಿಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
