
ಮುಂಡಾಜೆ: ಕೊಣಾಜೆ ಸಮೀಪದ ಮುಡಿಪುವಿನ ಕುಟುಂಬವೊಂದು ಜಾವಗಲ್ ಗೆ ತೆರಳುತ್ತಿದ್ದ ಮಿನಿ ಬಸ್ಸಿಗೆ ಚಿಕ್ಕಮಗಳೂರು ಕಡೆಯಿಂದ ಉಜಿರೆ ಕಡೆ ಹೋಗುತಿದ್ದ ಕಂಟೈನರ್ ಲಾರಿ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ಸೀಟ್ ಎಂಬಲ್ಲಿ ಶನಿವಾರ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಕಡೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಕಂಟೈನರ್ ವಾಹನ ಮಿನಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಕಂಟೈನರ್ ಚಾಲಕ ವಾಹನ ನಿಲ್ಲಿಸದೆ ತಪ್ಪಿಸಿಕೊಂಡು ಬಂದಿದ್ದು ಈ ವೇಳೆ ಉಜಿರೆ ಬಳಿ ಸಾರ್ವಜನಿಕರು ಲಾರಿಯನ್ನು ಅಡ್ಡಗಟ್ಟಿದರು. ಮಿನಿ ಬಸ್ಸಿನ ಚಾಲಕ, ಓರ್ವ ಮಹಿಳೆ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಂಟೈನರ್ ವಾಹನ ಕೆಎಸ್ಸಾರ್ಟಿಸಿ ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಅಪಾಯವನ್ನರಿತ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸ್ಸನ್ನು ತೀರಾ ರಸ್ತೆ ಬದಿಗೆ ಚಲಾಯಿಸಿದ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ ಎಂದು ಮಿನಿ ಬಸ್ ನ ಪ್ರಯಾಣಿಕರು ತಿಳಿಸಿದ್ದಾರೆ.
