ಮುಂಬೈ: ತನ್ನ ಗರ್ಭವನ್ನು ಮುಂದುವರೆಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಮಹಿಳೆಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಭ್ರೂಣಕ್ಕೆ ತೀವ್ರವಾದ ಸಮಸ್ಯೆಗಳು ಇರುವುದರಿಂದ ವಿವಾಹಿತ ಮಹಿಳೆಗೆ 32ನೇ ವಾರದಲ್ಲಿ ಗರ್ಭಪಾತ ಮಾಡಿಕೊಳ್ಳಲು ಕೋರ್ಟ್ ಅನುಮತಿ ನೀಡಿದೆ.
ಗರ್ಭದಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೌತಮ್ ಪಟೇಲ್ ಮತ್ತು ನ್ಯಾಯಮೂರ್ತಿ ಎಸ್.ಜಿ. ದಿಗೆ ಅವರಿದ್ದ ಪೀಠ, ಭ್ರೂಣಕ್ಕೆ ತೀವ್ರ ಆರೋಗ್ಯ ಸಮಸ್ಯೆಗಳಿದ್ದಾಗ ಗರ್ಭಪಾತಕ್ಕೆ ನಿಗದಿಪಡಿಸಿರುವ ಅವಧಿಯನ್ನು ಪರಿಗಣಿಸಬಾರದು ಎಂದು ಹೇಳಿತು.
‘ಗರ್ಭಪಾತ ಮಾಡಿಸಿಕೊಳ್ಳಬೇಕು ಎಂಬುದು ಮಹಿಳೆ ತಾನಾಗಿಯೇ ತೆಗೆದುಕೊಂಡಿರುವ ನಿರ್ಧಾರ. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧರಿಸುವ ಹಕ್ಕು ಮಹಿಳೆಗಿದೆಯೇ ಹೊರತು ವೈದ್ಯಕೀಯ ಸಂಸ್ಥೆಗಲ್ಲ. ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಬೆಳೆಸುವುದು ತಾಯಿಗೆ ಜೀವನ ಪೂರ್ತಿ ಕಷ್ಟವಾಗುತ್ತದೆ. ಹಾಗಾಗಿ ಈ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಸರ್ಕಾರದ ನಿಯಮದ ಪ್ರಕಾರ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಬೇಕು. ಆದರೆ, ವಿಶೇಷ ಕೆಟಗರಿಗೆ 24 ವಾರದ ಮಿತಿ ಹಾಕಲಾಗಿದೆ ಎಂದಿದೆ.
ಜಸ್ಟೀಸ್ ಗೌತಮ್ ಪಟೇಲ್ ಮತ್ತು ಎಸ್.ಜಿ. ದಿಗೆ ಅವರ ವಿಭಾಗೀಯ ಪೀಠ, ಜನವರಿ 20 ರಂದು ಈ ತೀರ್ಪು ನೀಡಿತ್ತು. ಅದರ ಪ್ರತಿಯನ್ನು ಸೋಮವಾರ ಲಭ್ಯವಾಗಿದ್ದು, ಭ್ರೂಣವು ಗಂಭೀರ ಅಸಹಜತೆಗಳನ್ನು ಹೊಂದಿದ್ದರೂ ಸಹ ಅದನ್ನು ಕೊನೆಗೊಳಿಸಬಾರದು ಎಂಬ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಕೋರ್ಟ್ ನಿರಾಕರಿಸಿದೆ. ಗರ್ಭಾವಸ್ಥೆಯು ಬಹುತೇಕ ಅದರ ಕೊನೆಯ ಹಂತದಲ್ಲಿದೆ ಎಂಬ ಕಾರಣ ನೀಡಿ ವೈದ್ಯಕೀಯ ಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಭ್ರೂಣವು ತೀವ್ರವಾದ ಅಸಹಜತೆಗಳನ್ನು ಹೊಂದಿದೆ ಮತ್ತು ದೈಹಿಕ ಹಾಗೂ ಮಾನಸಿಕ ವಿಕಲಾಂಗತೆಯೊಂದಿಗೆ ಮಗು ಜನಿಸುತ್ತದೆ ಎಂದು ಸೋನೋಗ್ರಫಿ ಬಹಿರಂಗಪಡಿಸಿದ ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. “ತೀವ್ರವಾದ ಭ್ರೂಣದ ಅಸಹಜತೆಯಿಂದಾಗಿ, ಗರ್ಭಾವಸ್ಥೆಯ ಅವಧಿಯು ಅಪ್ರಸ್ತುತವಾಗುತ್ತದೆ. ಅರ್ಜಿದಾರರು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸುಲಭವಾದ ನಿರ್ಧಾರವಲ್ಲ. ಆದರೆ ಆ ನಿರ್ಧಾರವು ಅವರದು, ಮತ್ತು ಅವರು ಮಾತ್ರ ತೆಗೆದುಕೊಳ್ಳುವುದು. ಆಯ್ಕೆ ಮಾಡುವ ಹಕ್ಕು ಅರ್ಜಿದಾರರದ್ದು. ಇದು ವೈದ್ಯಕೀಯ ಮಂಡಳಿಯ ಹಕ್ಕಲ್ಲ”’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.