January 22, 2025
WhatsApp Image 2024-09-16 at 9.38.28 AM

ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಗಲಭೆ ಪೂರ್ವ ನಿಯೋಜಿತ ಘಟನೆ ಎಂದು ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಆರೋಪ ಮಾಡುತ್ತಿವೆ. ಗಲಾಟೆ ನಡೆಯುವ ವೇಳೆ ಸ್ಥಳೀಯರು ರಕ್ಷಣೆ ಮಾಡುವಂತೆ ಅಂಗಲಾಚಿ ಬೇಡಿಕೊಂಡರೂ ಪೊಲೀಸರು (Police) ಅಸಹಾಯಕರಂತೆ ನಿಂತು ನೋಡುತ್ತಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಿಡಿಗೇಡಿಗಳು ಮಂಡ್ಯ ಸರ್ಕಲ್​ನ ಸಾಧನಾ ಟೆಕ್ಸ್​ಟೈಲ್​ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾ ಅನ್ನು ಹಾರೆಯಿಂದ ಹೊಡೆದಾಕಿ, ಬೆಂಕಿ ಹಚ್ಚುತ್ತಿದ್ದರು. ಈ ವೇಳೆ ಸ್ಥಳೀಯರು, “ಮಾಲೀಕ 30 ಲಕ್ಷ ರೂ. ಬಂಡವಾಳ ಹಾಕಿ ಬಟ್ಟೆ ಅಂಗಡಿ ತೆರೆದಿದ್ದಾನೆ. ಸರ್​ ರಕ್ಷಣೆ ಮಾಡಿ. ಬಟ್ಟೆ ಅಂಗಡಿ ಉಳಿಸಿ” ಎಂದು ಪೊಲೀಸರ ಮುಂದೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಸ್ಥಳೀಯರ ಮಾತಿಗೆ ಕಿವಿಗೊಡದ ಪೊಲೀಸರು, ಸುಮ್ಮನೆ ನೋಡುತ್ತ ನಿಂತಿರುವ ದೃಶ್ಯ ವಿಡಿಯೋದಲ್ಲಿದೆ. ಕೊನೆಗೆ ದುಷ್ಕರ್ಮಿಗಳು ಪೊಲೀಸರು, ಸ್ಥಳೀಯರ ಕಣ್ಣು ಮುಂದೆಯೇ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ಅಂಗಲಾಚುತ್ತಿರುವ ದೃಶ್ಯ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಿಎಫ್​ಐ ಕೈವಾಡ?

ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಹಿಂದೆ ನಿಷೇಧಿತ ಪಿಎಫ್​ಐ ಕೇವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನಾಗಮಂಗಲ ಕೋಮುಗಲಭೆ ಸಂಬಂಧ 74 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಎಫ್ಐಆರ್​​ನಲ್ಲಿ ಎ44 ಮತ್ತು ಎ61 ಕೇರಳ ಮೂಲದವರು ಎಂದು ತಿಳಿದು ಬಂದಿದೆ.  ಎ44 ಯೂಸುಫ್, ಎ61 ನಾಸೀರ್ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳು. ಇವರು ‌ನಿಷೇಧಿತ ಪಿಎಫ್​ಐ ಸಂಘಟನೆ‌‌ ಸದಸ್ಯರು ಎಂಬ ಅನುಮಾನ ವ್ಯಕ್ತವಾಗಿದೆ. ಯೂಸುಫ್ ಮತ್ತು ನಾಸೀರ್ ಕೆಲ ದಿನಗಳಿಂದ ನಾಗಮಂಗಲದಲ್ಲಿ ವಾಸವಿದ್ದರು. ಈ ಗಲಭೆ ಹಿಂದೆ ಇವರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಓಲೈಕೆ ರಾಜಕಾರಣದಿಂದ ಇಂತಹ ಘಟನೆಗಳು ಸಂಭವಿಸಿದೆ ಎಂದು ಬಿಜೆಪಿ ಆರೋಪ ಮಾಡಿದೆ. “ಗಳಸ್ಯ-ಕಂಠಸ್ಯ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಕರ್ನಾಟಕದ ಶಾಂತಿಯನ್ನು ಕದಡಲು ಸದಾ “ಸಿದ್ದ”ವಾಗಿವೆ. ಕೇರಳದ ನಿಷೇಧಿತ ಪಿಎಫ್ಐ ಸಂಘಟನೆಯ ನಾಸೀರ್ ಮತ್ತು ಯೂಸೂಫ್ ಗೆ ಕರ್ನಾಟಕದ ನಾಗಮಂಗಲದಲ್ಲಿ ಏನು ಕೆಲಸ..??” ಎಂದು ಬಿಜೆಪಿ ಪ್ರಶ್ನಿಸಿದೆ.

“ಹಳೇ ಮೈಸೂರು ಭಾಗದಲ್ಲಿ ಕನ್ನಡಿಗರ ನೆಮ್ಮದಿ ಕೆಡಿಸಲು ದೊಡ್ಡದೊಂದು ಷಡ್ಯಂತ್ರ ರೂಪುಗೊಂಡಿರುವುದು ನಾಗಮಂಗಲ ದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದರೆ ಮಾತ್ರ ಕರ್ನಾಟಕದಲ್ಲಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಅವರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಓಲೈಕೆ ರಾಜಕಾರಣವನ್ನು ಸ್ವಲ್ಪ ಬದಿಗಿಟ್ಟು, ಕನ್ನಡಿಗರ ಹಿತದೃಷ್ಟಿಯಿಂದ ನಾಗಮಂಗಲ ಗಲಭೆ ಪ್ರಕರಣವನ್ನು ಎನ್ಐಎಗೆ ವಹಿಸಿ” ಎಂದು ಬಿಜೆಪಿ ಒತ್ತಾಯಿಸಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.