ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ನಡೆಯುತ್ತಿರುವ ಗೋಬ್ಯಾಕ್ ಶೋಭಕ್ಕ ಅಭಿಯಾನ ಮುಂದುವರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೋಭಕರಂದ್ಲಾಜೆ ವಿರುದ್ದ ಆಕ್ರೋಶ ಕೇಳಿ ಬರುತ್ತಿದೆ.
ಇತ್ತೀಚೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿರುವ ಶೋಭಾಕರಂದ್ಲಾಜೆ ಗೆ ಸ್ವತಃ ಬಿಎಸ್ ವೈ ಯಡಿಯೂರಪ್ಪ ಅವರು ಸಪೋರ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಶೋಭಕ್ಕ ಅಭಿಯಾನ ಮುಂದುವರೆದಿದ್ದು, ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದರೆ ಒಂದು ಲಕ್ಷ ನೋಟಾ ವೋಟ್ ಹಾಕಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಲಾಗಿದೆ.
ಶೋಭಾ ಕರಂದ್ಲಾಜೆ ಅವರು ಈ ಬಾರಿಯೂ ಸ್ಪರ್ಧೆ ಮಾಡುತ್ತಾರೆ, ಮತ್ತೆ ಗೆದ್ದೇ ಗೆಲ್ಲುತ್ತಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ಹೇಳಿ ಹೋದ ಬಳಿಕ ಈವರೆಗೆ ಪತ್ರ ಅಭಿಯಾನ ನಡೆಸಿದವರು ಇದೀಗ ನೋಟಾ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಮೋದಿ ಹೆಸರಿನಲ್ಲಿ ಗೆದ್ದು ಮೋದಿಯವರಿಗೆ ಕಳಂಕ ಆಗಿರುವ ಶೋಭಕ್ಕನ ವಿರುದ್ಧ ಸ್ವಚ್ಛಭಾರತ ಮಿಷನ್ ಪ್ರಾರಂಭ ಮಾಡಿರುವ ಸನಾತನಿಗಳು ನಾವು ಎಂದು ಸನಾತನ ಹಿಂದುತ್ವ ಫೇಸ್ ಬುಕ್ ಪೇಜ್‌ನಲ್ಲಿ ಶೋಭಾ ಕರಂದ್ಲಾಜೆ ವಿರೋಧಿಗಳು ಹೇಳಿಕೊಂಡಿದ್ದಾರೆ.ಶೋಭಾ ಕರಂದ್ಲಾಜೆ ಮಾತ್ರ ಅಲ್ಲ, ಅವರೊಂದಿಗೆ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರ ವಿರುದ್ಧವೂ ಆಕ್ರೋಶ ಹೊರಹಾಕಲಾಗಿದೆ.