ಬೆಂಗಳೂರು: ರಾಜ್ಯಸಭೆ ಚುನಾವಣೆ ಸಮಯದಲ್ಲಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು FSL ವರದಿಯಲ್ಲಿ ದೃಢಪಟ್ಟಿದೆ.
ದುಷ್ಕರ್ಮಿಗಳು ನಾಸಿರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಪೊಲೀಸರು ಕೆಲ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಶಂಕಿತ ವ್ಯಕ್ತಿಗಳ ಧ್ವನಿಯನ್ನು ಪೊಲೀಸರು FSLಗೆ ರವಾನೆ ಮಾಡಿದ್ದರು. FSLನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಆರೋಪಿಯನ್ನು ಬಂಧಿಸಲು ತಯಾರಿ ನಡೆದಿದೆ.
ವಿಧಾನಸೌಧ ಠಾಣೆ ಪೊಲೀಸರು ಈವರೆಗೆ 7 ಮಂದಿಯ ವಿಚಾರಣೆ ನಡೆಸಿದ್ದಾರೆ. ಮೂವರ ವಾಯ್ಸ್ ಸ್ಯಾಂಪಲ್ FSLಗೆ ರವಾನಿಸಿದ್ದಾರೆ. ವಿಚಾರಣೆಗೆ ಒಳಪಟ್ಟ ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಪೊಲೀಸರು 26 ಮಂದಿಯ ಪಟ್ಟಿ ಮಾಡಿದ್ದು, ಇನ್ನೂ 19 ಜನರ ವಿಚಾರಣೆ ನಡೆಯುತ್ತಿದೆ.