January 22, 2025
ff

“ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೊರಗಿನಿಂದ ಒಂದಷ್ಟು ಭಿನ್ನ ಅಭಿಪ್ರಾಯ ಬರುತ್ತಿದೆ ಆದರೆ ನಮಗೆ ಜನರ ಅಭಿಪ್ರಾಯ ಮುಖ್ಯ. ನಮಗೆ ಒಂದು ಉತ್ತಮ ಸಿನಿಮಾ ಮಾಡುವ ಹಂಬಲ ಇತ್ತು ಅದು ನೆರವೇರಿದೆ ಇನ್ನೂ ಹಲವರು ಸಿನಿಮಾ ನೋಡಿಲ್ಲ ಅವರೆಲ್ಲರೂ ಸಿನಿಮಾ ನೋಡಬೇಕು“ ಎಂದು ಕಲ್ಜಿಗ ಸಿನಿಮಾ ನಿರ್ದೇಶಕ ಸುಮನ್ ಸುವರ್ಣ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

“ಸಿನಿಮಾ ನೋಡಿದವರು ಇಂತಹ ಸಿನಿಮಾ ಇನ್ನಷ್ಟು ಬರಬೇಕು, ಇಂದಿನ ಯುವಜನತೆಗೆ ಇನ್ನಷ್ಟು ಭಯ ಭಕ್ತಿ ಬರುತ್ತೆ, ಸಿನಿಮಾದಲ್ಲಿ ದೈವ ಅಪಚಾರ ನಡೆದಿಲ್ಲ ಇದನ್ನು ಸಿನಿಮಾ ನೋಡದೆ ಇರುವವರು ಮಾಡುತ್ತಿದ್ದಾರೆ ಅವರು ಸಿನಿಮಾ ನೋಡಿ ಆಮೇಲೆ ಮಾತಾಡಬೇಕು” ಎಂದವರು ಹೇಳಿದರು.

ಚಿತ್ರದ ನಿರ್ಮಾಪಕ ಶರತ್ ಕುಮಾರ್ ಎ.ಕೆ. ಮಾತನಾಡಿ, “ಸಿನಿಮಾದಲ್ಲಿ ಕೊರಗಜ್ಜನ ದೃಶ್ಯ ಬೇಡ ಎಂದು ದೈವಾರಾಧನಾ ರಕ್ಷಣಾ ಸಮಿತಿ ಮನವಿ ಮಾಡಿದೆ. ಆದರೆ ಇದನ್ನು ನಾನೊಬ್ಬನೇ ನಿರ್ಣಯ ಮಾಡಲು ಆಗುವುದಿಲ್ಲ. ಈ ಕುರಿತು ಸಿನಿಮಾ ತಂಡದ ಜೊತೆ ಕೂತು ನಿರ್ಣಯ ಮಾಡಬೇಕಿದೆ. ವಿರೋಧ ಮಾಡುವವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಅದೊಂದು ದೃಶ್ಯ ಬೇಡ ಎಂದಷ್ಟೇ ಹೇಳಿದ್ದಾರೆ. ನಾನು ಇಲ್ಲಿಯವನು ಅಲ್ಲದೆ ಇರಬಹುದು ಆದರೆ ನಿರ್ದೇಶಕ ಸುಮನ್ ಸುವರ್ಣ ಇಲ್ಲೇ ಹುಟ್ಟಿ ಬೆಳೆದವರು. ಹೀಗಾಗಿ ನಮಗೂ ಇಲ್ಲಿನ ದೈವಾರಾಧನೆ ಬಗ್ಗೆ ತಿಳಿದಿದೆ, ಕಳೆದ ಮೂರು ದಿನಗಳಲ್ಲಿ 15000ಕ್ಕೂ ಹೆಚ್ಚು ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಅವರಿಗೆ ಬೇಸರ ಆಗಿಲ್ಲ ಮಾತಾಡುವವರು ಸಿನಿಮಾದ ಒಂದು ದೃಶ್ಯ ನೋಡಿ ಮಾತಾಡುತ್ತಿದ್ದಾರೆ ಅವರು ಪೂರ್ತಿ ಸಿನಿಮಾ ನೋಡಲಿ. ಬೇಕಾದರೆ ಅವರಿಗೆ ಒಂದು ಶೋ ವ್ಯವಸ್ಥೆ ಮಾಡುತ್ತೇವೆ ವೀಕ್ಷಿಸಿ ಅಭಿಪ್ರಾಯ ಹೇಳಲಿ“ ಎಂದರು.

ನಾಯಕನಟ ಅರ್ಜುನ್ ಕಾಪಿಕಾಡ್ ಮಾತಾಡಿ, ”ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕಲ್ಜಿಗ ಸಿನಿಮಾವನ್ನು ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಇದು ಖುಷಿಯ ವಿಚಾರ. ಎಲ್ಲರೂ ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.
ನಟ ವಿಜಯ್ ಶೋಭರಾಜ್ ಪಾವೂರು ಮಾತಾಡಿ, ”ನಡೆಯುತ್ತಿರುವ ವಿದ್ಯಾಮಾನಗಳೆಲ್ಲ ಸಾಮಾನ್ಯವಾದುದು. ಆದರೆ ಸಿನಿಮಾ ನೋಡಿದ ಜನರು ಮೆಚ್ಚಿಕೊಂಡಿದ್ದಾರೆ ಅದು ನಮ್ಮಲ್ಲಿ ಹುಮ್ಮಸ್ಸು ತುಂಬಿದೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ನಾವೆಲ್ಲರೂ ತುಳುವರು ನಮ್ಮ ಸಂಸ್ಕೃತಿಗೆ ಅಪಚಾರವಾದರೆ ನಾವೆಲ್ಲರೂ ಒಟ್ಟಿಗೆ ನಿಂತು ಹೊರಾಡೋಣ. ಆದರೆ ಒಳ್ಳೆಯ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸೋಣ” ಎಂದರು.

ವೇದಿಕೆಯಲ್ಲಿ ನಟ ರಂಜನ್ ಬೋಳೂರು, ಜ್ಯೋತಿಷ್ ಶೆಟ್ಟಿ, ಚಿತ್ರ ಹಂಚಿಕೆದಾರ ಸಚಿನ್ ಎ.ಎಸ್. ಉಪ್ಪಿನಂಗಡಿ, ರಕ್ಷಿತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.