ಉಡುಪಿ/ಮಂಗಳೂರು: ಭವಿಷ್ಯದಲ್ಲಿ ಮಕ್ಕಳಿಗೆ ಮೆದುಳು ಜ್ವರ ಬಾಧಿಸದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಮುನ್ನೆಚ್ಚರಿಕೆ ಲಸಿಕೆ ಅಭಿಯಾನ ನಡೆಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.
ಡಿ. 5ರಿಂದ 25ರ ವರೆಗೆ ಅಭಿಯಾನ ನಡೆಯಲಿದ್ದು, 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ 2,17,707 ಮಕ್ಕಳಿಗೆ ಹಾಗೂ ಮಂಗಳೂರು ಪಾಲಿಕೆ ಮತ್ತು ಗ್ರಾಮಾಂತರ ಭಾಗದ 2.20 ಲಕ್ಷ ಸೇರಿದಂತೆ ಜಿಲ್ಲೆಯ ಸುಮಾರು 5 ಲಕ್ಷ ಮಕ್ಕಳು ಲಸಿಕೆ ಪಡೆಯಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಬಾಗಲಕೋಟೆ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಶೇ. 100ರಷ್ಟು ಲಸಿಕಾಕರಣದ ಗುರಿ ಹೊಂದಿದ್ದು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸಲು ಸಭೆಯನ್ನು ಹಮ್ಮಿಕೊಂಡಿದೆ.
1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಶಾಲೆಗಳಲ್ಲಿಯೇ ಲಸಿಕೆ ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಔಟ್‌ರೀಚ್ ಲಸಿಕಾ ಶಿಬಿರ ನಡೆಸಲಾಗುವುದು. ಪ್ರತೀ ಮಗುವಿಗೆ ಲಸಿಕೆ ಹಾಕಿದ ಅನಂತರ ಎಡ ಕೈ ಹೆಬ್ಬೆರಳಿಗೆ ಮಾರ್ಕರ್ ಪೆನ್ನಿನಿಂದ ಗುರುತು ಹಾಕಲಾಗುವುದು.
ಮೆದುಳು ಜ್ವರ ಹೇಗೆ ಬರುತ್ತದೆ?
ಜಪಾನೀಸ್ ಎನ್‌ಸೆಫೆಲೈಟಿಸ್ ವೈರಸ್ (ಜೆಇವಿ)ನಿಂದ ಮೆದುಳು ಜ್ವರ ಬಾಧಿಸುತ್ತದೆ. ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಈ ವೈರಸ್ ಹರಡುತ್ತದೆ. ಇದಕ್ಕೆ ಲಸಿಕೆ ಚುಚ್ಚುಮದ್ದು ಪರಿಣಾಮಕಾರಿ ಅಸ್ತ್ರವಾಗಿದೆ. ಈ
ಕಾಯಿಲೆಯಿಂದ ಬಳಲುತ್ತಿರುವವರು ಜ್ವರ ಪೀಡಿತರಾಗಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ, ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.
ಲಕ್ಷಣವೇನು?
ಮೆದುಳು ಜ್ವರದ ಪ್ರಮುಖ ಲಕ್ಷಣಗಳಲ್ಲಿ ವ್ಯಕ್ತಿಗೆ ಜ್ವರ, ತಲೆನೋವು, ನಿಶಕ್ತಿ ಇರುತ್ತದೆ. ಜ್ವರದ ತೀವ್ರತೆ ಹೆಚ್ಚಾದಂತೆ ಕುತ್ತಿಗೆ ನೋವು, ವಾಂತಿ, ಮಾತನಾಡಲು ಅಸಾಧ್ಯವೆನಿಸುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜತೆಗೆ ಪಾರ್ಶ್ವವಾಯು ಕೂಡ ಬಾಧಿಸಬಹುದಾಗಿದೆ.
ಡಿಸೆಂಬರ್ 5ರಿಂದ ಮೂರು ವಾರಗಳ ಕಾಲ ಲಸಿಕೆ ಅಭಿಯಾನ ಅಂಗನವಾಡಿ, ಶಾಲೆಗಳಲ್ಲಿ ನಡೆಯಲಿದೆ. ಮಕ್ಕಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಈ ಕುರಿತು ಜಾಗೃತಿ ಅಭಿಯಾನಕ್ಕೂ ಆರೋಗ್ಯ ಇಲಾಖೆ ಮುಂದಾಗಿದೆ.