
closeup of the feet of a dead body covered with a sheet, with a blank tag tied on the big toe of his left foot, in monochrome, with a vignette added

ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ ಗುಜರಾತ್ ಮೂಲದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೃತರನ್ನು ಗುಜರಾತ್ ನ ನವಸಾರಿ ನಿವಾಸಿ 58ವರ್ಷದ ಬಲವಂತ ಬಾಯ್ ತಾಂಡೇಲ ಎಂದು ಗುರುತಿಸಲಾಗಿದೆ. ಇವರು ಹಾಗೂ ಇವರ ಮಗ ಮುಂಬೈನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಹತ್ತು ದಿನಗಳ ಹಿಂದೆ ಊರಿಗೆ ಹೋಗುವುದಾಗಿ ಮುಂಬೈಯಿಂದ ಹೊರಟ್ಟಿದ್ದರು. ಆದರೆ, ತನ್ನ ಊರಾದ ಗುಜರಾತ್ ಗೆ ಹೋಗುವ ಬದಲು ಉಡುಪಿಯ ಮಲ್ಪೆಗೆ ಬಂದಿದ್ದರು ಎನ್ನಲಾಗಿದೆ.
ಮಲ್ಪೆಗೆ ಬಂದಿದ್ದ ಬಲವಂತ ಬಾಯ್, ವಸತಿ ಗೃಹವೊಂದರಲ್ಲಿ ತಂಗಿದ್ದರು. ನಾಲ್ಕು ದಿನಗಳ ಹಿಂದೆ ವಸತಿ ಗೃಹಕ್ಕೆ ಬಂದಿದ್ದ ಇವರು, ನ.26ರಂದು ವಸತಿ ಗೃಹದಿಂದ ಹೊರಗೆ ಬಾರದೇ ಇದ್ದುದ್ದರಿಂದ ಸಂಶಯಗೊಂಡ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಚಿಂತಾಜನಕವಾಗಿ ನೆಲದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು.
ಈ ಬಗ್ಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ ಮಾಹಿತಿ ನೀಡಿದ್ದು, ಅವರು ಕೂಡಲೇ ಸ್ಥಳಕ್ಕೆ ಬಂದು ಆ್ಯಂಬುಲೆನ್ಸ್ ನಲ್ಲಿ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಆಸ್ಪತ್ರೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಲವಂತ ರಾಯ್ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.