July 18, 2025
WhatsApp Image 2025-07-05 at 3.15.11 PM

ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಸದ್ರಿ ಅಪರಾದ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ಹಿನ್ನೆಲೆ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿರುವುದಾಗಿ ಜುಲೈ 3ರಂದು ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ.

ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು, ದಿನಾಂಕ 04.07.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(a) ಬಿಎನ್ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಬಗ್ಗೆ ನೀಡಿದ ಇನ್ನೊಂದು ಪ್ರಕಟಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದೂರಿಗೆ ಅನ್ವಯವಾಗುವಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್‌ ಝೆರಾಕ್ಸ್‌ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ತಿಳಿಸಲಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>