

ಮಂಗಳೂರು: ಬೆಂಗಳೂರು ಮತ್ತು ಮುಂಬೈನಿಂದ ನಿಷಿದ್ಧ ಮಾದಕ ವಸ್ತು ಎಂಡಿಎಂಎ ತರಿಸಿ, ಅದನ್ನು ನಗರದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕುಖ್ಯಾತ ದನಕಳ್ಳ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್ (36) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹1.20 ಲಕ್ಷ ಮೌಲ್ಯದ 12.05 ಗ್ರಾಂ ಎಂಡಿಎಂಎ, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಸ್ವಿಫ್ಟ್ ಕಾರು ಸೇರಿ ಒಟ್ಟು ₹4,31,250 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಮಂಗಳೂರು ಸಿಸಿಬಿ ಪೊಲೀಸರು, ಜುಲೈ 3, 2025ರಂದು ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯ ಬಳಿ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕಬೀರ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರಿವಾಳ ಕಬೀರ್ ಮೇಲೆ ಹತ್ತಾರು ದನಕಳ್ಳತನ ಪ್ರಕರಣಗಳು!
ಬಂಧಿತ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್ ಮಂಗಳೂರು ನಗರದ ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಕಂಕನಾಡಿ ನಗರ, ಉಳ್ಳಾಲ, ಬಜ್ಪೆ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ದನಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು, ಸುಮಾರು 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.