ಮಂಗಳೂರು: ಕೊರೊನಾವನ್ನು ತಡೆಯುವ ಅತ್ಯಂತ ಸುಲಭ ಮಾರ್ಗವೆಂದರೆ ತುಳಸಿ ಮಾಲೆ ಧರಿಸುವುದು: ಹೀಗೊಂದು ಸಲಹೆಯನ್ನು ನೀಡಿದ್ದಾರೆ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿ ಮಾಡುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್.
ಶಿವಮೊಗ್ಗದಲ್ಲಿ ಭಾನುವಾರ ನಡೆಯಲಿರುವ ಹಿಂದು ಜಾಗರಣ ಸಮಾವೇಶದಲ್ಲಿ ಭಾಗವಹಿಸಲಿರುವ ಅವರು ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಈ ವೇಳೆ ಮಾತನಾಡಿದ ಅವರು, ʻʻಶುದ್ಧ ತುಳಸಿ ಮಾಲೆಯನ್ನು ಧರಿಸಿದರೆ ಯಾವುದೇ ಕೊರೊನಾ ಬರುವುದಿಲ್ಲʼʼ ಎಂದರು.
ʻʻಕೊರಳಿಗೆ ಹಾಕಿರುವ ತುಳಸೀ ಮಾಲೆಯಿಂದ ಔಷಧೀಯ ಗುಣಗಳು ಹುಟ್ಟುತ್ತವೆ. ಬೂಸ್ಟರ್ ಡೋಸನ್ನು ಅಗತ್ಯವಾಗಿ ಪಡೆದುಕೊಂಡು, ಪಾರಂಪರಿಕ ಔಷಧೀಯ ಪದ್ಧತಿಗಳನ್ನು ಅನುಸರಿಸಿದರೆ ಕೊರೊನಾಗೆ ಹೆದರಬೇಕಾಗಿಲ್ಲʼʼ ಎಂದು ಪ್ರಜ್ಞಾ ಸಿಂಗ್ ಹೇಳಿದರು.
ಸುರತ್ಕಲ್ ಶಾಸಕ ಭರತ್ ಶೆಟ್ಟಿ ಮತ್ತು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಸಂಸದೆಗೆ ಸ್ವಾಗತ ಕೋರಿದರು.
ಶಿವಮೊಗ್ಗ ಸಮಾವೇಶ
ಹಿಂದು ಜಾಗರಣ ವೇದಿಕೆಯ ದಕ್ಷಿಣ ಕರ್ನಾಟಕದ ವತಿಯಿಂದ 3ನೇ ತ್ರೈವಾರ್ಷಿಕ ಸಮ್ಮೇಳನವನ್ನು ಭಾನುವಾರ (ಡಿ. 25) ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ನಗರದ ಎನ್.ಇ.ಎಸ್. ಕಾಲೇಜು ಮೈದಾನದಲ್ಲಿ ಹಿಂದು ಹುಲಿಗಳ ಆರ್ಭಟಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ. 3 ವರ್ಷಕ್ಕೊಮ್ಮೆ ನಡೆಯುವ ಈ ಪ್ರಾಂತ ಸಮ್ಮೇಳನ ಈ ಬಾರಿ ಶಿವಮೊಗ್ಗದಲ್ಲಿ ನಡೆಯಲಿದೆ. ಇದಕ್ಕಾಗಿ 18 ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ. ಭೋಪಾಲ್ ಸಂಸದೆ ಮತ್ತು ಪ್ರಖರ ವಾಗ್ಮಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.