ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ಯೋಜನೆಯಡಿ ಕುಚಲಕ್ಕಿ ವಿತರಣೆ ಮಾಡಲಾಗುವುದು. ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಖರೀದಿಸುವ ಪ್ರತಿ ಕ್ವಿಂಟಲ್ ಕುಚಲಕ್ಕಿ ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಇದಕ್ಕಾಗಿ ಶೀಘ್ರವೇ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುವುದು.ಒಂದು ವರ್ಷಕ್ಕೆ 12 ಲಕ್ಷ ಟನ್ ಅಕ್ಕಿ ಬೇಕಾಗುತ್ತದೆ. ಇದಕ್ಕಾಗಿ 18 ಲಕ್ಷ ಟನ್ ಭತ್ತ ಸಂಸ್ಕರಿಸಿಕೊಳ್ಳಬೇಕಿದೆ. ವಾರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.