ಮಂಗಳೂರು: ಬಜಪೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮನೆಗಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಕಳವು ಮಾಡಿರುವ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುರತ್ಕಲ್ ಬೊಕ್ಕಬೆಟ್ಟು ನಿವಾಸಿ ತೌಸೀಫ್ ಅಹಮ್ಮದ್ (34) ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಫರಾಜ್ (27) ಎಂದು ಗುರುತಿಸಲಾಗಿದೆ.
ಆರೋಪಿಗಳು ದಿನಾಂಕ 13-01- 2023 ರಂದು ಮಂಗಳೂರು ತಾಲೂಕು ಅತ್ತೂರು ಗ್ರಾಮದ ಪುಣಿಕೋಡಿಯ ರಸ್ತೆಯ ಬದಿಯಲ್ಲಿರುವ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಮತ್ತು ದಿನಾಂಕ 26-03-2021 ರಂದು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಮನಲಪದವು ರಸ್ತೆಯ ಬದಿಯಲ್ಲಿರುವ ಸದಾಶಿವ ಸಾವಂತ ಎಂಬವರ ಮನೆಯ ಬೀಗವನ್ನು ಮುರಿದು ಕಳ್ಳತನ ಮಾಡಿದ್ದರು. ಈ ಕುರಿತಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬಜಪೆ ಪೊಲೀಸ್ ಠಾಣೆಯ PSI ಗುರಪ್ಪ ಕಾಂತಿ ರವರ ತಂಡವು ದಿನಾಂಕ 29-09-2023 ರಂದು ಮದ್ಯಾಹ್ನ 4-00 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಪಣಂಬೂರು ಗ್ರಾಮದ ಕುದುರೆಮುಖ ಜಂಕ್ಷನ ಬಳಿ ಇರುವ KIOCL ಬಸ್ಸು ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಒಟ್ಟು 4.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣಗಳನ್ನು, ಕಳವು ಮಾಡಲು ಉಪಯೋಗಿಸಿದ 50,000/- ರೂಪಾಯಿ ಮೌಲ್ಯದ ಬೈಕ್ ನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿತರ ವಿರುದ್ಧ ಮಂಗಳೂರು ನಗರ ಪಣಂಬೂರು ಪೊಲೀಸ್ ಠಾಣೆ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಬಂಟ್ವಾಳ ನಗರ ಪೊಲೀಸ್ ಠಾಣೆ, ಮತ್ತು ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇರುತ್ತದೆ.