
ಮಂಗಳೂರು: ನಗರ ವ್ಯಾಪ್ತಿ ಹಾಗೂ ಹೊರವಲಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಿತಿ ಮೀರಿದ ವೇಗ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಹಲವೆಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ಈಗ ಅತ್ಯಾಧುನಿಕ ‘ಲೇಸರ್ ಆಧಾರಿತ ಸ್ಪೀಡ್ ಗನ್’ ಕ್ಯಾಮೆರಾಗಳನ್ನು ಬಳಕೆಗೆ ಇಲಾಖೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು 73ರಲ್ಲಿ ವೇಗದ ಮಿತಿ ಹಾಗೂ ಸಂಚಾರ ಸೂಚನಾ ಫಲಕಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅಲ್ಲದೆ, ಹೆಚ್ಚಾಗಿ ಅಪಘಾತ ಸಂಭವಿಸುವ ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದೀಗ ಅತೀ ವೇಗದ ಚಾಲನೆಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರು ‘ಲೇಸರ್ ಟ್ರ್ಯಾಕ್’ ಸ್ಪೀಡ್ ಗನ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಈ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ಸಹಿತ ಸಾಕ್ಷ್ಯದೊಂದಿಗೆ ಇ-ಚಲನ್ ನೀಡಲಾಗುತ್ತಿದೆ.
ಈ ಸಾಧನವು ವಾಹನಗಳ ಮೇಲೆ ಲೇಸರ್ ಕಿರಣಗಳನ್ನು ಹರಿಸುವ ಮೂಲಕ ಕ್ಷಣಾರ್ಧದಲ್ಲಿ ಅವುಗಳ ವೇಗವನ್ನು ನಿಖರವಾಗಿ ಲೆಕ್ಕಾಚಾರ ಮಾಡುತ್ತದೆ. ಒಂದು ವೇಳೆ ವಾಹನವು ನಿಗದಿತ ವೇಗ ಮಿತಿಯನ್ನು ಮೀರಿದರೆ, ವಾಹನದ ಚಿತ್ರ, ನೋಂದಣಿ ಸಂಖ್ಯೆ, ಸಮಯ ಮತ್ತು ವೇಗದ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗುತ್ತವೆ. ಇದು ವಿಡಿಯೋ ಸಾಕ್ಷ್ಯವನ್ನೂ ಸಂಗ್ರಹಿಸುವುದರಿಂದ ದಂಡ ವಿಧಿಸಲು ಬಲವಾದ ಪುರಾವೆ ಸಿಗುತ್ತದೆ. ಈ ಸಾಧನದ ಪ್ರಮುಖ ವೈಶಿಷ್ಟ್ಯವೆಂದರೆ, ಬಹಳ ದೂರದಲ್ಲಿರುವ ವಾಹನಗಳ ವೇಗವನ್ನೂ ಇದು ನಿಖರವಾಗಿ ಪತ್ತೆಹಚ್ಚುತ್ತದೆ. ಹಳೆಯ ಹ್ಯಾಂಡ್ಹೆಲ್ಡ್ ಸ್ಪೀಡ್ ಗನ್ಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ.
ಅಪಘಾತ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಪೊಲೀಸರು ಈ ಲೇಸರ್ ಸಾಧನಗಳನ್ನು ಸ್ಟ್ಯಾಂಡ್ ಮೇಲೆ ಅಳವಡಿಸಿ ವಾಹನಗಳ ವೇಗವನ್ನು ಪರೀಕ್ಷಿಸುತ್ತಿದ್ದಾರೆ. ವೇಗದ ಮಿತಿ ಮೀರಿದ ವಾಹನ ಸವಾರರಿಗೆ ಸ್ಥಳದಲ್ಲೇ ಅಥವಾ ಮೊಬೈಲ್ ಸಂದೇಶದ ಮೂಲಕ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ. ಪಕ್ಕಾ ಸಾಕ್ಷ್ಯದೊಂದಿಗೆ ಪ್ರಕರಣ ದಾಖಲಾಗುವುದರಿಂದ ನಿಯಮ ಉಲ್ಲಂಘಿಸುವವರು ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
