February 18, 2025
WhatsApp Image 2024-09-22 at 10.28.12 AM
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಮರದ ದಿಮ್ಮಿ ತಾಗಿ ಬೋಟ್‌ಗೆ ಹಾನಿಯಾಗಿ ದಿಕ್ಕಾಪಾಲಾಗುತ್ತಿದ್ದ ತ್ರಿಸೆವೆಂಟಿ ಬೋಟೊಂದನ್ನು ಮೀನುಗಾರಿಕೆಯಲ್ಲಿ ತೊಡಗಿದ್ದ ಇನ್ನೆರಡು ಬೋಟ್‌ನವರು ರಕ್ಷಿಸಿದ್ದಾರೆ. ಅದರಲ್ಲಿದ್ದ 6 ಮೀನುಗಾರರನ್ನು ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಕೋಟ ಸಮೀಪ ಆಳ ಸಮುದ್ರದಲ್ಲಿ ಸಂಭವಿಸಿದೆ.
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್‌ನಲ್ಲಿದ್ದ ಬಸವ ಖಾರ್ವಿ, ಪ್ರಮೋದ್‌, ಭಾಸ್ಕರ್‌, ವೈಕುಂಠ, ಶೇಖರ್‌ ಹಾಗೂ ಸೂರ್ಯ ಅವರನ್ನು ರಕ್ಷಿಸಲಾಗಿದೆ. ಕೋಟ ಸಮೀಪದ ಅರಬಿ ಸಮುದ್ರದಲ್ಲಿ ಮರದ ಬೃಹತ್‌ ದಿಮ್ಮಿ ತಾಗಿ, ಬೋಟಿಗೆ ಹಾನಿಯಾಗಿದ್ದು, ಈ ವೇಳೆ ಅಲ್ಲಿಯೇ ಇದ್ದ ವರುಣ ಸಿದ್ಧಿ ಹಾಗೂ ಬೃಂದಾವನ ಎನ್ನುವ ಬೋಟ್‌ನಲ್ಲಿದ್ದ ಮೀನುಗಾರರು ನೆರವಿಗೆ ಬಂದು, ಈ ಬೋಟ್‌ ಅನ್ನು ಹಂಗಾರಕಟ್ಟೆಯ ಬಂದರಿಗೆ ಸುರಕ್ಷಿತವಾಗಿ ತರುವಲ್ಲಿ ಸಹಕರಿಸಿದರು. ಬೋಟ್‌ಗೆ ಭಾರೀ ಹಾನಿಯಾಗಿದ್ದು, ಅಂದಾಜು 25 ಲಕ್ಷ ರೂ. ನಷ್ಟ ಉಂಟಾಗಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಸಾಲಿಗ್ರಾಮ ಮೂಲದ ಗೀತಾ ಅವರ ಮಾಲಕತ್ವದ ಜಲಸಾಗರ ಹಾಗೂ ಭವಾನಿ ಅವರ ಮಾಲಕತ್ವದ ಜಲಜನನಿ ಬೋಟ್‌ಗಳು ಸೆ.17ರಂದು ಭಾರೀ ಗಾಳಿ-ಮಳೆಗೆ ಗೋಪಾಡಿ ಚರ್ಕಿಕಡು ಎನ್ನುವಲ್ಲಿ ದಡಕ್ಕೆ ಅಪ್ಪಳಿಸಿದ್ದು, ಅದನ್ನು ತೆರವು ಗೊಳಿಸಲು ನಾಲ್ಕು ದಿನಗಳಿಂದ ನಡೆಸಿದ ಕಾರ್ಯಾಚರಣೆ ವಿಫಲವಾಗಿದೆ ಎಂದು ತಿಳಿಯಲಾಗಿದೆ.
ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಮುದ್ರದ ಅಲೆಗೆ ಸಿಲುಕಿ ದಡಕ್ಕೆ ಅಪ್ಪಳಿಸಿದ್ದು, ಮೀನುಗಾರರು ಸುರಕ್ಷಿತವಾಗಿದ್ದರೂ ಬೋಟ್‌ಗೆ ಸಾಕಷ್ಟು ಹಾನಿಯಾಗಿತ್ತು. ಅನಂತರ ಸಮುದ್ರದ ಮೂಲಕ ಇನ್ನೊಂದು ಬೋಟ್‌ ಬಳಸಿ ನೀರಿಗೆ ಎಳೆಯಲು ಪ್ರಯತ್ನಿಸಲಾಯಿತು ಹಾಗೂ ತಾಂತ್ರಿಕ ತಜ್ಞರ ಸಹಕಾರ ಪಡೆದು ಕಾರ್ಯಾಚರಣೆ ನಡೆಸಿದರೂ ಯಶಸ್ವಿಯಾಗಿಲ್ಲ. ಎರಡೂ ಬೋಟ್‌ಗಳು ಸಂಪೂರ್ಣ ಹಾನಿಗೀಡಾಗುವ ಆತಂಕ ಎದುರಾಗಿದ್ದು, ಸುಮಾರು 30 ಲಕ್ಷ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.