
ಮಂಗಳೂರು: ಮಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಒಂದು ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
beary_royal_nawab ಎಂಬ ಹೆಸರಿನ ಈ ಇನ್‌ಸ್ಟಾಗ್ರಾಮ್ ಪುಟವು ಸುಮಾರು 01 ಲಕ್ಷದಷ್ಟು ಫಾಲೋವರ್ಸ್‌ಗಳನ್ನು ಹೊಂದಿತ್ತು. ಈ ಪುಟದಲ್ಲಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರ ನಡುವೆ ದ್ವೇಷದ ಭಾವನೆ ಹುಟ್ಟುವಂತೆ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವಂತೆ ಪ್ರಚೋದನಕಾರಿ ಪೋಸ್ಟ್‌ಗಳನ್ನು ನಿರಂತರವಾಗಿ ಹಾಕಲಾಗುತ್ತಿತ್ತು ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬರ್ಕೆ ಮತ್ತು ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 03 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ತನಿಖೆಯನ್ನು ಇದೀಗ ಮಂಗಳೂರು ನಗರ ಸಿ.ಇ.ಎನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಈ ಪುಟದ ಕುರಿತು ಮಾಹಿತಿ ನೀಡುವಂತೆ ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗೆ ಪತ್ರ ವ್ಯವಹಾರ ನಡೆಸಲಾಗಿತ್ತು. ಅದರಂತೆ, ಕಾನೂನು ಜಾರಿ ಸಂಸ್ಥೆಯು beary_royal_nawab ಎಂಬ ಇನ್‌ಸ್ಟಾಗ್ರಾಮ್ ಪುಟವು ಭಾರತ ದೇಶದಲ್ಲಿ ಕಾರ್ಯನಿರ್ವಹಿಸದಂತೆ ಕ್ರಮ ಕೈಗೊಂಡಿದೆ. ಅಂದರೆ, ಈ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
