ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ಬಗೆದಷ್ಟು, ಕಾಮಕೇಳಿ ಪ್ರಕರಣ ಒಂದೊಂದು ಬಯಲಾಗುತ್ತಿದೆ. ಹಾಸ್ಟೆಲ್‍ನಲ್ಲಿ ಹಿಂಸೆ ಅನುಭವಿಸಿದ ಹಳೆ ವಿದ್ಯಾರ್ಥಿನಿ ಕೂಡ ಇದೀಗ ಸ್ಫೋಟಕ ಮಾಹಿತಿ ನೀಡಿದ್ದಾಳೆ.
2012ರಲ್ಲಿ ನಾನು ಮಠದಲ್ಲಿ ಓದುತ್ತಿದ್ದೆ. 2012ರಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ಆಗ ಹಾಸ್ಟೆಲ್ ವಾರ್ಡನ್ ಆಗಿ ರಶ್ಮಿ ನೇಮಕಗೊಂಡರು. ರಶ್ಮಿ ಬಂದ ಮೇಲೆ ಹಾಸ್ಟೆಲ್ ಚಿತ್ರಣ ಬದಲಾಯಿತು. ನನ್ನನ್ನು ಬಲವಂತವಾಗಿ ಸ್ವಾಮೀಜಿ ಹತ್ತಿರ ಕಳುಹಿಸುತ್ತಿದ್ದರು. ಹಣ್ಣು ಕೊಡುತ್ತಾರೆ ಹೋಗು ಅಂತ ಹೇಳುತ್ತಿದ್ದರು. ನಾನು ಹಾಗೂ ನನ್ನ ಸ್ನೇಹಿತೆ ಹೋಗುತ್ತಿದ್ದೆವು ಎಂದಿದ್ದಾಳೆ.
ಎಲ್ಲರೂ ಮಲಗಿದ ಮೇಲೆ ಹಿಂಬಾಗಿಲಿನಿಂದ ಹೋಗುತ್ತಿದ್ದೆವು. ಶ್ರೀಗಳು ನನಗೆ ಡ್ರೈಫ್ರೂಟ್ಸ್, ಚಾಕ್ಲೇಟ್ ಕೊಡುತ್ತಿದ್ದರು. ನನ್ನ ವಸ್ತ್ರ ಕಳಚಲು ಹೇಳುತ್ತಿದ್ದರು. ನಾನು ಶ್ರೀಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದೆ. ನನ್ನನ್ನು ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಅಲ್ಲದೆ ಅಂಗಾಂಗ ಮುಟ್ಟುತ್ತಿದ್ದರು. ಬಳಿಕ ನನ್ನೊಂದಿಗೆ ಗಂಡ-ಹೆಂಡತಿಯಂತೆ ಸೇರುತ್ತಿದ್ದರು ಎಂದು ತಿಳಿಸಿದ್ದಾಳೆ.
ಬೆಳಗ್ಗಿನ ಜಾವ 4.30ಕ್ಕೆ ಅಲಾರಂ ಇಟ್ಟುಕೊಂಡು ನನ್ನನ್ನು ಎಚ್ಚರಿಸುತ್ತಿದ್ದರು. ನಾನು ಬೆಳಗ್ಗಿನ ಜಾವ ಹಾಸ್ಟೆಲ್‍ಗೆ ಸೇರಿಕೊಳ್ಳುತ್ತಿದ್ದೆ. ಈ ವಿಷಯ ಹಾಸ್ಟೆಲ್‍ನಲ್ಲಿದ್ದ ಕೆಲವರಿಗೆ ಗೊತ್ತಾಯಿತು. ಬಳಿಕ ನನ್ನನ್ನು ಮಲ್ಲಾಡಿಹಳ್ಳಿ ಹಾಸ್ಟೆಲ್‍ಗೆ ಕಳುಹಿಸಿದರು ಎಂದು ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ.