April 17, 2026
WhatsApp Image 2026-04-17 at 4.29.25 PM

ಮಂಗಳೂರು : ಕೇಬಲ್ ವಾಹಿನಿಯೊಂದರಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಹಾಸ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮಗೆ ಮತ್ತು ತಮ್ಮ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಖ್ಯಾತ ಕಲಾವಿದ ಸುಂದರ ರೈ ಮಂದಾರ ಮತ್ತು ತಂಡದವರು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಸಾರವಾದ ಹಾಸ್ಯ ನಾಟಕವೊಂದರಲ್ಲಿ ಪ್ರಭಾವಿ ವ್ಯಕ್ತಿಯನ್ನು ಸುಳ್ಳಿನ ಮೂಲಕ ತೇಜೋವಧೆ ಮಾಡುವ ಕಥಾಹಂದರವಿದೆ. ಈ ನಾಟಕಕ್ಕೂ ಧರ್ಮಸ್ಥಳದ ಘಟನೆಗಳಿಗೂ ಅಥವಾ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ನಾಟಕದ ಪಾತ್ರವೊಂದನ್ನು ತಮಗೆ ಹೋಲಿಸಲಾಗಿದೆ ಎಂದು ಭಾವಿಸಿರುವ ತಿಮರೋಡಿ ಅವರು ಕಲಾವಿದರಿಗೆ ಕರೆ ಮಾಡಿ ತೀವ್ರವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರ ರೈ ಮಂದಾರ, “ನಾವು ಕಲಾವಿದರು, ಸಮಾಜ ನೀಡುವ ವಿಮರ್ಶೆ ಅಥವಾ ಬೈಗುಳವನ್ನು ಸಹಿಸಿಕೊಳ್ಳುತ್ತೇವೆ. ಆದರೆ ತಿಮರೋಡಿ ಅವರು ನಮ್ಮ ತಂದೆ, ತಾಯಿ ಹಾಗೂ ಮನೆಯ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮರ್ಯಾದೆ ಇರುವ ಯಾರೂ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲದ ಕಾರಣ ನ್ಯಾಯ ಕೇಳಿ ಪೊಲೀಸರಿಗೆ ದೂರು ನೀಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಯಾರದ್ದೇ ಪ್ರಚೋದನೆ ಅಥವಾ ಒತ್ತಡವಿಲ್ಲ ಎಂದು ಅವರು ತಿಳಿಸಿದರು.ಮತ್ತೊಬ್ಬ ಕಲಾವಿದ ದಿನೇಶ್ ಕೋಡಪದವು ಮಾತನಾಡಿ, “ಜನರು ಪೆದಂಬು (ಮೂರ್ಖ) ಎಂದು ಹೇಳುತ್ತಾರೆ, ನಮಗೂ ಅದಕ್ಕಿಂತ ಕೆಟ್ಟ ಪದಗಳ ‘ಪೆದಂಬು’ ಗೊತ್ತಿದೆ. ನಮಗೆ ನಾಲಗೆಯೇ ಆಸ್ತಿ, ಅದೇ ಜೀವನೋಪಾಯ. ಈ ಹಿಂದೆ ಅವರ ಮೇಲೆ ಗೌರವವಿತ್ತು, ಆದರೆ ಈಗ ಅದು ಕಳೆದುಹೋಗಿದೆ. ಇಂತಹ ನಿಂದನೆಯನ್ನು ಕೇಳಿಕೊಂಡು ಸುಮ್ಮನಿರುವ ಮನಸ್ಥಿತಿ ನಮಗಿಲ್ಲ,” ಎಂದು ಆಕ್ರೋಶ ಹೊರಹಾಕಿದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಎಫ್ಐಆರ್ ದಾಖಲಾಗಿದೆ. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮತ್ತು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರ ತಾಯಿ ಹೆಸರಿನಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.