May 21, 2026
WhatsApp Image 2026-05-21 at 9.08.26 AM

ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ನಡೆದಿದ್ದ ಯುವತಿಯ ಕೊಲೆ ಯತ್ನ ಪ್ರಕರಣವನ್ನು ಬೇಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಣಿಪಾಲ- ಅಲೆವೂರು ರಸ್ತೆಯ  ಶಾಂತಿನಗರ ಸಮೀಪದ ವಾಗ್ಲೆ ಸ್ಟೋರ್ ಬಳಿಯಿರುವ ಮಹಿಳಾ ಪಿಜಿಯಲ್ಲಿ ವಾಸವಿದ್ದ ಅಂಕೋಲಾ ಮೂಲದ ಯೋಗಿತಾ ಎಂಬಾಕೆಯ ಕೊಲೆ ಯತ್ನ ನಡೆದಿತ್ತು. ಪಿಜಿಯಲ್ಲಿ ಒಬ್ಬಳೇ ಮಲಗಿದ್ದ ಯೋಗಿತ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಅಲ್ಲದೇ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಮಣಿಪಾಲ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ತಂಡ ಇದೀಗ ಯುವತಿಯೊಬ್ಬಳನ್ನು ವಶಕ್ಕೆ ಪಡೆದಿದ್ದಾರೆ.

ಯೋಗಿತಾ ವಾಸವಿದ್ದ ಪಿಜಿಯ ಇನ್ನೊಂದು ರೂಮಿನಲ್ಲಿ ವಾಸವಿದ್ದ ಯುವತಿ ಸುಷ್ಮಾ ನಾಯ್ಕ್ (30) ಬಂಧಿತ ಯುವತಿ.   ಆರೋಪಿ ಸುಷ್ಮಾ ನಾಯ್ಕ್ ಒಬ್ಬಳೇ ಈ ಕೃತ್ಯ ಎಸಗಿರುವುದಾಗಿ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ.   ಯುವತಿ ಯೋಗೀತಾ ಹಾಗೂ ಸುಷ್ಮಾ ನಾಯ್ಕ್ ಅಕ್ಕಪಕ್ಕದ ರೂಮಿನವರು. ಯೋಗೀತಾ ರೂಮಿನಲ್ಲೇ ಆರೋಪಿ ಸುಷ್ಮಾ ಮೇ. 12ರಂದು ಮಲಗಿದ್ದಾಳೆ.

ಮಧ್ಯರಾತ್ರಿವರೆಗೂ ಪೋನಿನಲ್ಲಿ ಮಾತನಾಡುತ್ತಿದ್ದ ಸುಷ್ಮಾ, ಯೋಗೀತಾ ನಿದ್ದೆಗೆ ಜಾರುವುದನ್ನೇ ಹೊಂಚು ಹಾಕಿ ಕುಳಿತಿದ್ದಾಳೆ. ಬೆಳಗ್ಗಿನ ಜಾವಾ ಯೋಗೀತಾ ಗಾಢ ನಿದ್ದೆಗೆ ಜಾರಿರುವುದನ್ನು ಖಾತ್ರಿಪಡಿಸಿಕೊಂಡ ಆರೋಪಿ ಸುಷ್ಮಾ ಮೊದಲೇ ರೂಮಿನ ಹೊರಗಡೆ ತಂದಿಟ್ಟಿದ್ದ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿದ್ದಾಳೆ. ಬಳಿಕ ಯೋಗೀತಾಳ ಕಿವಿಯೋಲೆ ಹಾಗೂ ಚಿನ್ನದ ಸರವನ್ನು ಕಸಿದು ತನ್ನ ರೂಮಿಗೆ ತೆರಳಿ ಮಲಗಿದ್ದಳು. ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದ  ಸ್ನೇಹಿತೆಯರು ಬಂದಾಗ ರಕ್ತದ ಮಡುವಿನಲ್ಲಿದ್ದ ಯೋಗಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಯೋಗೀತಾಳಿಗೆ ಚಿಕಿತ್ಸೆ ಮುಂದುವರಿದಿದೆ.

ತನಿಖೆ ಕೈಗೆತ್ತಿಕೊಂಡಿದ್ದ ಮಣಿಪಾಲ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ವಿವಿಧ ಆಯಾಮಗಳಿಗೆ ತನಿಖೆ ನಡೆಸಿ ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿ ಸುಷ್ಮಾ, ಹಲವು ದಿನಗಳಿಂದ ಕೊಲೆಗೆ ಸ್ಕೆಚ್ ಹಾಕಿದ್ದಳು. ಅಲ್ಲದೇ ಆನ್ಲೈನ್ ನಲ್ಲಿ ಚಾಕು ಕೂಡ ತರಿಸಿದ್ದಳು.

ಯೋಗೀತಾ ಒಬ್ಬಳೇ ಇರುವುದಕ್ಕಾಗಿ ಸಂಚು ರೂಪಿಸಿ ಕೊಲೆಗೆ ಯತ್ನಿಸಿದ್ದಾಳೆ ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.  ಮಣಿಪಾಲ ಪೋಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿ ಎನ್, ಪಿಎಸ್ ಐ ಶಂಭುಲಿಂಗಯ್ಯ ಹಾಗೂ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ವಿವೇಕ್, ಚೇತನ್, ಅಜ್ಜಲ್, ರವಿರಾಜ್, ಮಂಜುನಾಥ್, ಉಡುಪಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ಜೀವನ್, ಪ್ರಸನ್ನ, ಮಲ್ಲಯ್ಯ ಹೇಮಂತ್ ಹಾಗೂ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಮತ್ತು ನಿತಿನ್ ರವರ ನೆರವಿನೊಂದಿಗೆ ಕಾರ್ಯಾಚರಣೆ ನಡೆದಿದೆ . ಆರೋಪಿ ಸುಷ್ಮಾ ನಾಯ್ಕ್ ಉತ್ತರ ಕನ್ನಡ ಜಿಲ್ಲೆಯವಳಾಗಿದ್ದು, ಮಣಿಪಾಲದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಬಂದಿದ್ದಳು. ಹಣದ ವ್ಯವಹಾರದಲ್ಲಿ ತೊಡಗಿ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಳು. ಹೀಗಾಗಿ ಚಿನ್ನದ ಸರಕ್ಕಾಗಿಯೇ ಕೊಲೆಗೆ ಯತ್ನಿಸಿದ್ದಾಳೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಪೊಲೀಸರು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ

About The Author

Leave a Reply

Your email address will not be published. Required fields are marked *

You cannot copy content of this page.