May 20, 2026
image - 2026-05-20T155608.517

ಬೆಂಗಳೂರು: ಹೆಬ್ಬಾಳ ಪೊಲೀಸರು ಬೃಹತ್​​ ಡ್ರಗ್​​ ಜಾಲವೊಂದನ್ನು ಭೇದಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ  ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್​​ನ ಹೆಡೆಮುರಿ ಕಟ್ಟಿದ್ದಾರೆ. ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಈ ಒಂದೇ ತಂಡದಿಂದ ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಈ ಜಾಲ ಮೂರು ಲೇಯರ್​​ಗಳಲ್ಲಿ ಕೆಲಸ ಮಾಡುತ್ತಿತ್ತು. ಮಾದಕ ವಸ್ತುಗಳ ಸಾಗಾಟಕ್ಕೆ ಆರೋಪಿಗಳು ನಾನಾ ದಾರಿಗಳನ್ನು ಕಂಡುಕೊಂಡಿದ್ದರು ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.

ದೆಹಲಿಯಿಂದ ರೈಲಿನಲ್ಲಿ ಡ್ರಗ್ಸ್ ಸಾಗಿಸಿದ್ದ ಆರೋಪಿಗಳು ಅವನ್ನು ಸೀರೆ , ಐರನ್ ಮಾಡಲು ಬಳಸುವ ಟೇಬಲ್ ಮತ್ತು ಚೇರ್​​ಗಳಲ್ಲಿ ಅಡಗಿಸಿಟ್ಟು ತಂದಿದ್ದರು. ಗಿಫ್ಟ್ ರೀತಿಯಲ್ಲಿ ಪ್ಯಾಕ್ ಮಾಡಿ ಅವುಗಳಣ್ನ ಸಾಗಾಟ ಮಾಡಿದ್ದರು. ರೈಲಲ್ಲಿ ಸಾಗಿಸಿ ತಂದಿದ್ದ ಈ ಮಾದಕ ವಸ್ತುಗಳನ್ನು ಕಾರಿಗೆ ಶಿಫ್ಟ್​​ ಮಾಡುವ ವೇಳೆ ದಾಳಿ ನಡೆಸಿರುವ ಪೊಲೀಸರು 4 ಕೆಜಿ 300 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸರ್ಜಾಪುರದ ಮನೆಯೊಂದರಲ್ಲಿ ಬಾಕಿ ಡ್ರಗ್ಸ್ ಇಟ್ಟಿರುವ ಮಾಹಿತಿ ಸಿಕ್ಕ ಹಿನ್ನೆಲೆ ಬೆಂಗಳೂರಿನ ಪೆಡ್ಲರ್ ಮನ್ಸೂರ್ ನಿವಾಸದಲ್ಲಿ ದಾಳಿ ನಡೆಸಲಾಗಿತ್ತು. ರೇಡ್​​ ವೇಳೆ ಮನೆಯಲ್ಲಿ 10 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಬಳಿಕ ಅಬ್ದುಲ್ ಸಮಾದ್ ನಿವಾಸದಲ್ಲಿಯೂ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಆಧಾರದಲ್ಲಿ ಆತನ ಹೆಣ್ಣೂರು ನಿವಾಸದಲ್ಲಿ ತಪಾಸಣೆ ನಡೆಸಿದಾಗ 3.5 ಕೆಜಿ ಎಂಡಿಎಂಎ ಸಿಕ್ಕಿದೆ. ಆ ಮೂಲಕ ಒಟ್ಟು 34 ಕೋಟಿ ಮೌಲ್ಯದ 17 ಕೆಜಿಗೂ ಹೆಚ್ಚಿನ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಇನ್ನು ಉತ್ತರ ಭಾರತ ಅಥವಾ ವಿದೇಶದಿಂದ  ದೆಹಲಿಗೆ ಬರುತ್ತಿದ್ದ ಡ್ರಗ್ಸ್​​ನ ಅಲ್ಲಿಂದ ದೇಶದ ವಿವಿಧ ಭಾಗಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಸೆನೆಗಲ್​ನ ಡನ್ಫಾ ಗೆರಾಲ್ಡ್, ತಾಂಜೇನಿಯಾದ ಮೆಗ್ರಾತ್ ಮತ್ತು ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ ದೆಹಲಿಯ ಡೀಲರ್​​ಗಳಾಗಿದ್ದರೆ, ದೆಹಲಿ ಮೂಲದ ರೀನಾ ಯಾದವ್ , ದೆಬಶಿಶ್ ಬ್ಯಾನರ್ಜಿ ಮತ್ತು ಧೀರಜ್ ಬೆಂಗಳೂರಿನ ಟ್ರಾನ್ಸ್‌ಪೋರ್ಟರ್​​ಗಳಾಗಿ ಕೆಲಸ ಮಾಡುತ್ತಿದ್ದರು. ಮಂಗಳೂರು ಮೂಲದ ಬೆಂಗಳೂರು ನಿವಾಸಿಗಳಾಗಿರುವ ಮಹಮ್ಮದ್ ಮನ್ಸೂರ್ ಮತ್ತು ಅಬ್ದುಲ್ ಸಮಾದ್ ಬೆಂಗಳೂರಲ್ಲಿ ಪೆಡ್ಲರ್ಸ್​ಗಳಾಗಿದ್ದರು ಎಂಬುದು ತಿಳಿದುಬಂದಿದೆ.

ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಐದು ಕೇಸ್ ದಾಖಲಾಗಿತ್ತು. ಈ ಸಂಬಂಧ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗ ವಿಚಾರಣೆ ವೇಳೆ ಡ್ರಗ್ಸ್ ಜಾಲದ ಮುಂದಿನ ಲೇಯರ್ ಪತ್ತೆಯಾಗಿತ್ತು. ಆ ಮಾಹಿತಿ ಅಧಾರದಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೆಹಲಿ ಮತ್ತು ದೆಹಲಿ ಎನ್​​ಸಿಆರ್​​ನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದಕ್ಕಾಗಿ ಹೆಬ್ಬಾಳ ಮತ್ತು ಉತ್ತರ ವಿಭಾಗದ ಸುಮಾರು ನಲವತ್ತು ಪೊಲೀಸರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ತಂಡ ಕಳೆದ ಒಂದು ತಿಂಗಳಿಂದ ಈ ಕುರಿತು ಕೆಲಸ ಮಾಡಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಮತ್ತು ಪೆಡ್ಲರ್ಸ್​​ಗಳನ್ನು ಹಂತ ಹಂತವಾಗಿ ಅರೆಸ್ಟ್​​ ಮಾಡಲಾಗಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.