ಕೋಟೆಕಾರು ಬೀರಿ ಉಳ್ಳಾಲ ತಾಲೂಕಿನ ಬೆಳೆಯುತ್ತಿರುವ ಪ್ರದೇಶ ಜನವಸತಿ ಪ್ರದೇಶವಾಗಿರುವ ಇಲ್ಲಿ ಹಲವಾರು ಖ್ಯಾತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ಮಂಗಳೂರು-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಪ್ರಮುಖ ಜಂಕ್ಷನ್‌ಗಳಲ್ಲಿ ಕೋಟೆಕಾರು ಬೀರಿ ಜಂಕ್ಷನ್ ಕೂಡಾ ಒಂದು. ಕೋಟೆಕಾರು ಬೀರಿ ಜಂಕ್ಷನ್‌ನಿಂದ ದೇರಳಕಟ್ಟೆಗೆ ಮಾಡೂರು ಮೂಲಕ ರಸ್ತೆ ಸಂಪರ್ಕವಿರುವುದರಿಂದ ಇಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ವಿನ್ಯಾಸದಿಂದಾಗಿ ಕೋಟೆಕಾರು ಬೀರಿ ಜಂಕ್ಷನ್ ಅಪಘಾತ ವಲಯವಾಗಿದೆ. ಇಲ್ಲಿ ಅಪಘಾತದಿಂದಾಗಿ ನೂರಾರು ಜನರು ಮರಣ ಹೊಂದಿರುವುದಲ್ಲದೆ ಸಾವಿರಾರು ಜನರು ಗಾಯಗೊಂಡಿರುವುದು ಆತಂಕದ ವಿಷಯವಾಗಿದೆ.
ಸಂಬಂಧಪಟ್ಟರು ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ. ಈ ಜಂಕ್ಷನ್‌ನಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಹೂವು, ತರಕಾರಿ ಮಳಿಗೆಗಳು ಹಾಗೂ ದಿನಬಳಕೆಯ ವಸ್ತುಗಳ ಮಳಿಗೆಗಳು ಇರುವುದರಿಂದ ಸ್ವಾಬಾವಿಕವಾಗಿ ವಾಹನ ದಟ್ಟಣೆಯು ಅಧಿಕವಾಗಿದ್ದು, ಜನರು ಜಂಕ್ಷನ್‌ನಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಮಸ್ಯೆ ಹೆಚ್ಚು ಜಟಿಲವಾಗಿದೆ. ಹಾಗೆಯೇ ಮಾಡೂರು, ದೇರಳಕಟ್ಟೆ ಕಡೆ ಹೋಗುವ ಜನರು ಸೂಕ್ತ ಬಸ್ಸು ನಿಲ್ದಾಣವಿಲ್ಲದೆ ಪಕ್ಕದ ರಿಕ್ಷಾ ಪಾರ್ಕ್‌ನಲ್ಲಿ ನಿಲ್ಲುವುದರಿಂದ ಬಸ್ಸು ಚಾಲಕರು ಸೂಕ್ತ ತಿಳುವಳಿಕೆಯಿಲ್ಲದೆ ವಿವೇಚನಾ ರಹಿತರಾಗಿ ರಿಕ್ಷಾ ಪಾರ್ಕ್ ಬಳಿ ಬಸ್ಸು ನಿಲುಗಡೆ ಮಾಡುವುದರಿಂದ ನೂರಾರು ಶಾಲಾ ಕಾಲೇಜು ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಜೀವಭಯದಿಂದ ರಿಕ್ಷಾ ಪಾರ್ಕ್‌ನಲ್ಲಿ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿಯಿದೆ. ರಿಕ್ಷಾ ಪಾರ್ಕ್‌ನಲ್ಲಿ ಬಸ್ಸಿಗಾಗಿ ಕಾಯಬೇಕಾದ ಸಂದರ್ಭದಲ್ಲಿ ಕೆಲ ರಿಕ್ಷಾ ಚಾಲಕರು ವಿವೇಚನೆ ಮರೆತು ಅನುಚಿತ ವರ್ತನೆ ತೋರುತ್ತಿರುವುದು ನಮಗೆ ಮುಜುಗರ ಉಂಟು ಮಾಡುತ್ತಿದೆ. ಈ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರುವುದು ಖಾಸಗಿ ಹಾಗೂ ಸರಕಾರಿ ಸಿಟಿ ಬಸ್ಸುಗಳ ಚಾಲಕರು, ಬಸ್ಸು ನಿಲುಗಡೆ ಜಂಕ್ಷನ್‌ನಲ್ಲಿ ಅವಕಾಶವಿಲ್ಲದಿದ್ದರೂ ಬಸ್ಸು ನಿಲುಗಡೆ ಮಾಡುತ್ತಿರುವುದು. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಇವರಿಗೆ ತಮ್ಮ ದೈನಂದಿನ ಬಸ್ಸು ಕಲೆಕ್ಷನ್ ಬಗ್ಗೆ ಚಿಂತೆಯೇ ಹೊರತು, ಸಾರ್ವಜನಿಕರ ಜೀವದ ಬಗ್ಗೆ ಕಾಳಜಿ ಇಲ್ಲದಿರುವುದು ಇವರ ಮಾನವೀಯತೆಯ ಬಗ್ಗೆ ಪ್ರಶ್ನೆ ಮೂಡುತ್ತಿದೆ. ಆದುದರಿಂದ ಸಾರ್ವಜನಿಕರಾದ ನಾವು ತಮ್ಮ ಗಮನಕ್ಕೆ ತರುವುದೇನೆಂದರೆ ಬೀರಿ ಜಂಕ್ಷನ್‌ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ, ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ನಿಲುಗಡೆಯನ್ನು ಸ್ವಲ್ಪ ಮುಂದಕ್ಕೆ ಸರಕಾರಿ ಸ್ಥಳದಲ್ಲಿರುವ ಕೋಟೆಕಾರು ಬೀರಿ ಪಂಚಾಯತ್ ಕಟ್ಟಡದ ಎದುರುಗಡೆ ನಿಲುಗಡೆಗೊಳಿಸಿದಲ್ಲಿ ಬೀರಿ ಜಂಕ್ಷನ್‌ನಲ್ಲಿರುವ ವಾಹನ ದಟ್ಟಣೆಯನ್ನು ಸರಿಪಡಿಸಬಹುದಲ್ಲದೆ ಸಾರ್ವಜನಿಕರಿಗೆ ಪಂಚಾಯತ್ ಬಿಲ್ಡಿಂಗ್ ಎದುರುಗಡೆ ನಿಲ್ಲಲು ಉತ್ತಮ ಸ್ಥಳಾವಕಾಶವಿದ್ದು, ಪ್ರಯಾಣಿಕರಿಗೆ ಬಸ್ಸಿಗಾಗಿ ಕಾಯಲು ತುಂಬಾ ಅನುಕೂಲವಾಗಿದೆ ಹಾಗೂ ಪಂಚಾಯತ್ ಕಟ್ಟಡದಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಇದ್ದು ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ತುಂಬಾ ಅನುಕೂಲವಾಗಲಿದೆ ಎಂದು ಸ್ಥಳೀಯ ನಾಗರಿಕರು ವಿಭಾಗೀಯ ನಿಯಂತ್ರಣಾಧಿಕಾರಿ ಕ.ರಾ.ರ.ಸಾ.ಸಂಸ್ಥೆ ಗೆ ಮನವಿ ಮಾಡಿದ್ದಾರೆ.