May 21, 2026
car-3

ರಾಜಸ್ಥಾನ: ರಾಜಸ್ಥಾನದಲ್ಲಿ ಪೋಷಕರನ್ನು ಎಚ್ಚರಿಸುವಂತಹ ಅತ್ಯಂತ ಆಘಾತಕಾರಿ ಮತ್ತು ಕರುಣಾಜನಕ ದುರಂತವೊಂದು ಸಂಭವಿಸಿದೆ. ಬಾಡಿಗೆ ಮನೆಯ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಆಟವಾಡಲು ಹೋದ ಇಬ್ಬರು ಪುಟಾಣಿ ಸಹೋದರಿಯರು ಕಾರಿನ ಬಾಗಿಲು ಲಾಕ್ ಆಗಿ, ಉಸಿರುಗಟ್ಟಿ ಸಾವನಪ್ಪಿದ ಘಟನೆ ನಡೆದಿದೆ,

ಮೃತ ಬಾಲಕಿಯರನ್ನು 8 ವರ್ಷದ ಟೀನಾ ಮತ್ತು 5 ವರ್ಷದ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ನಿವಾಸಿ, ಕ್ಷೌರಿಕ ವೃತ್ತಿ ಮಾಡುತ್ತಿರುವ ರಮೇಶ್ ಸೇನ್ ಎಂಬುವವರ ಪುತ್ರಿಯರಾಗಿದ್ದಾರೆ.

ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ಸಿಸಿಟಿವಿ (CCTV) ದೃಶ್ಯಾವಳಿಗಳು ಲಭ್ಯವಾಗಿವೆ. ಮನೆಯ ಸಮೀಪದಲ್ಲೇ ಇದ್ದ ಗ್ಯಾರೇಜ್ (ಕಾರ್ ರಿಪೇರಿ ಕಾರ್ಯಾಗಾರ) ಒಂದರಲ್ಲಿ ಅಪಘಾತಕ್ಕೀಡಾಗಿದ್ದ ಕೆಂಪು ಬಣ್ಣದ ಹಳೆಯ ಕಾರೊಂದನ್ನು ನಿಲ್ಲಿಸಲಾಗಿತ್ತು. ಆಟವಾಡುತ್ತಾ ಅಲ್ಲಿಗೆ ಹೋದ ಇಬ್ಬರು ಬಾಲಕಿಯರು, ಕಾರಿನ ಬಾಗಿಲು ತೆರೆದು ಅತ್ಯಂತ ನಿರಾಳವಾಗಿ ಒಳಗೆ ಕುಳಿತಿದ್ದಾರೆ. ಆದರೆ, ಒಳಗೆ ಹೋದ ತಕ್ಷಣ ಕಾರಿನ ಬಾಗಿಲು ಸ್ವಯಂಚಾಲಿತವಾಗಿ ಲಾಕ್ ಆಗಿದೆ.

ಬಾಗಿಲು ಮುಚ್ಚಿದ ನಂತರ ಬಾಲಕಿಯರಿಗೆ ಹೊರಬರಲು ಸಾಧ್ಯವಾಗಿಲ್ಲ. ಮೇ ತಿಂಗಳ ತೀವ್ರ ಬಿಸಿಲು ಮತ್ತು ಕಾರಿನ ಗಾಜುಗಳು ಸಂಪೂರ್ಣ ಮುಚ್ಚಿದ್ದರಿಂದ ಒಳಗಿನ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ. ಬಾಲಕಿಯರು ಬಾಗಿಲು ತೆರೆಯಲು ತೀವ್ರವಾಗಿ ಕೈಕಾಲು ಬಡಿದು ಪ್ರಯತ್ನಿಸಿದ್ದರೂ ಕಾರಿನ ಗೇಟ್ ತೆರೆದಿಲ್ಲ. ಕ್ರಮೇಣ ಕಾರಿನೊಳಗಿದ್ದ ಆಮ್ಲಜನಕ (Oxygen) ಖಾಲಿಯಾಗುತ್ತಾ ಬಂದಿದ್ದು, ಇಬ್ಬರು ಮಕ್ಕಳು ತೀವ್ರ ಆಘಾತ ಮತ್ತು ನೋವಿನಿಂದ ಕಾರಿನೊಳಗೇ ಕೊನೆಯುಸಿರೆಳೆದಿದ್ದಾರೆ.

“ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ನಾನು ಅಂಗಡಿಯಿಂದ ಊಟಕ್ಕೆ ಮನೆಗೆ ಬಂದಾಗ ಮಕ್ಕಳು ಕಾಣಿಸಲಿಲ್ಲ. ನೆರೆಹೊರೆಯವರನ್ನು ವಿಚಾರಿಸಿದಾಗ ಹತ್ತಿರದಲ್ಲೇ ಆಟವಾಡುತ್ತಿರಬಹುದು ಎಂದರು. ಸಂಶಯಗೊಂಡು ಗ್ಯಾರೇಜ್‌ನಲ್ಲಿದ್ದ ಕಾರಿನೊಳಗೆ ಇಣುಕಿ ನೋಡಿದಾಗ ನನ್ನ ಪ್ರಪಂಚವೇ ಉರುಳಿಬಿದ್ದಂತಾಯಿತು. ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು,” ಎಂದು ತಂದೆ ರಮೇಶ್ ಸೇನ್ ಕಣ್ಣೀರು ಹಾಕಿದ್ದಾರೆ.

ಈ ದುರಂತ ಇಡೀ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಕೇವಲ ನಾಲ್ಕು ವರ್ಷಗಳ ಹಿಂದೆಯಷ್ಟೇ ಈ ಮುಗ್ಧ ಮಕ್ಕಳ ತಾಯಿ ಹೃದಯಾಘಾತ ಹಠಾತ್ತನೆ ನಿಧನರಾಗಿದ್ದರು. ತಾಯಿಯ ನಿಧನದ ನಂತರ ತಂದೆ ರಮೇಶ್ ಅವರೇ ತಾಯಿಯೂ ಆಗಿ ಕಷ್ಟಪಟ್ಟು ಇಬ್ಬರು ಹೆಣ್ಣುಮಕ್ಕಳನ್ನು ಸಾಕಿ ಬೆಳೆಸುತ್ತಿದ್ದರು. ಆದರೆ, ವಿಧಿಯ ಆಟ ತಂದೆಯ ಪ್ರೀತಿಯ ಇಬ್ಬರು ಮಕ್ಕಳನ್ನು ಕಸಿದುಕೊಂಡಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.