
ಮಂಗಳೂರು : ಉದ್ಯಮಿಯೊಬ್ಬರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಹಲವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಮೊದಲ ಬಾರಿಗೆ ಚೈತ್ರಾ ಕುಂದಾಪುರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ”ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗೆ ಬರುತ್ತದೆ..” ಎಂದು ಹೇಳಿದ್ದಾರೆ. ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆ ತಂದ ವೇಳೆ ಸ್ವಾಮೀಜಿ ಬಂಧನದ ನಂತರ ದೊಡ್ಡವರ ಹೆಸರುಗಳು ಬಯಲಾಗಲಿದೆ ಎಂದಿದ್ದಾಳೆ.
“‘ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗೆ ಬರುತ್ತದೆ. ನಂತರ ದೊಡ್ಡವರ ಹೆಸರುಗಳು ಬಯಲಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ, ಅದಕ್ಕೆ ಈ ಷಡ್ತಂತ್ರ ಮಾಡಲಾಗಿದೆ. ಎ1 ಆರೋಪಿ ನಾನೇ ಆಗಿರಲಿ, ಆದರೆ ಸತ್ಯ ಹೊರಬರುತ್ತದೆ” ಎಂದು ಚೈತ್ರಾ ಹೇಳಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹಿಂದೂ ಕಾರ್ಯಕರ್ತೆ, ಭಾಷಣಕಾರಿಣಿ ಚೈತ್ರಾ ಕುಂದಾಪುರ (28), ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು (30), ರಮೇಶ್ (35), ಧನರಾಜ್ (35), ಪ್ರಜ್ವಲ್ (35), ಶ್ರೀಕಾಂತ್ (40) ಎಂಬುವರನ್ನು ಬಂಧಿಸಿದ್ದಾರೆ. ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ, ಪ್ರಸಾದ್ ಬೈಂದೂರು, ಚನ್ನನಾಯ್ಕ ಎಂಬುವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.