
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಜಾಡಿ ಎಂಬಲ್ಲಿ ಬೈಕ್ ಹಾಗೂ ಲಾರಿ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್ ಸವಾರ, ಹಾವೇರಿ ಮೂಲದ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಮಿಕನನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ನಿವಾಸಿ ಪರಸಪ್ಪ ಚಂದಪ್ಪ ಲಮಾಣಿ (40) ಎಂದು ಗುರುತಿಸಲಾಗಿದೆ.
ಪರಸಪ್ಪ ಯಾನೇ ಪರಶು ಅವರು ತನ್ನ ಪತ್ನಿಯೊಂದಿಗೆ ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಮಂಗಳವಾರ ತನ್ನ ಊರಾದ ಹೆಸರೂರಿನಲ್ಲಿ ಸಂಬಂಧಿಕ ಯುವಕನೊಬ್ಬ ಸಾವನ್ನಪ್ಪಿದ ಸುದ್ಧಿ ಕೇಳಿದ ಪರಸಪ್ಪ ಅವರು ಉಪ್ಪಳದಿಂದ ಹಾವೇರಿಗೆ ಹೊರಟಿದ್ದರು. ಆದರೆ ಊರಿಗೆ ಬಸ್ ಸಿಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಪರಶು ತನ್ನ ಬೈಕಿನಲ್ಲಿಯೇ ಊರಿಗೆ ಹೊರಟಿದ್ದರು. ಪರಶು ಬೈಕಿನಲ್ಲಿ ಮಂಗಳೂರು ಕುಮುಟಾ ಮಾರ್ಗವಾಗಿ ಹಾವೇರಿಗೆ ಹೊರಟಿದ್ದರು.
ಮಂಗಳವಾರ ತಡರಾತ್ರಿ ಸುಮಾರು 12.50ಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದಾಗ ಬೀಜಾಡಿ ಎಂಬಲ್ಲಿ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಪರಶು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಪರಶು ಅವರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
