
ಉಡುಪಿ: ಕಾರ್ಕಳ ತಾಲೂಕಿನ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ಎಪ್ರಿಲ್ 24 ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಪ್ರೇರಣಾ ಮೂಲ್ಯ ಚಿಕಿತ್ಸೆ ಫಲಕಾರಿಯಾಗದೆ ಎಪ್ರಿಲ್ 27ರಂದು ನಿಧನ ಹೊಂದಿದ್ದಾರೆ. ಇದರೊಂದಿಗೆ ಈ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಂತಾಗಿದೆ.
ಸಿಇಟಿ ಪರೀಕ್ಷೆ ಬರೆದು ತಂದೆ ನವೀನ್ ಚಂದ್ರ ಅವರೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ಕಾರ್ಕಳದಿಂದ ನಿಟ್ಟೆ ಕಡೆಗೆ ಬರುತ್ತಿದ್ದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯ ಕಾರು ಬೈಕ್ಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ತೀವ್ರತೆಗೆ ಬೈಕ್ ಎಸೆಯಲ್ಪಟ್ಟು, ನವೀನ್ಚಂದ್ರ ಹಾಗೂ ಪ್ರೇರಣಾ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ದಿನವೇ ನವೀನ್ಚಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇರಣಾ ಅವರು ಸೋಮವಾರ ಸಾವನ್ನಪ್ಪಿದ್ದಾರೆ. ತಂದೆ ಮತ್ತು ಏಕೈಕ ಮಗಳ ಸಾವಿನಿಂದ ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಗಾಂಜಾ ಸೇವಿಸದಿದ್ರೂ ಸುಳ್ಳು ಆರೋಪ; ಪೊಲೀಸರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ! ಸ್ಥಳೀಯರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
