
ಬೆಂಗಳೂರು: ಅನೈತಿಕ ಸಂಬಂಧಕ್ಕೆ ಈರುಳ್ಳಿ ವ್ಯಾಪಾರಿ ಬರ್ಬರವಾಗಿ ಕೊಲೆಯಾದ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿ ಈರುಳ್ಳಿ ವ್ಯಾಪಾರಿಯಾಗಿದ್ದು, ವ್ಯಾಪಾರದ ಉದ್ದೇಶದಿಂದ ಆಗಾಗ ಬೆಂಗಳೂರಿಗೆ ಬರುತ್ತಿದ್ದನು. ಈ ಸಂದರ್ಭದಲ್ಲಿ ಕಾಡುಗೋಡಿ ವ್ಯಾಪ್ತಿಯ ಮಹಿಳೆಯೊಬ್ಬಳ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ರೆಡ್ಡಿ ನಗರಕ್ಕೆ ಬಂದಾಗೆಲ್ಲಾ ಆಕೆಯ ಮನೆಗೆ ಹೋಗಿ ಬರುತ್ತಿದ್ದನು ಎನ್ನಲಾಗಿದೆ. ಈ ನಡುವೆ, ಅದೇ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿ ಅವರಿಬ್ಬರ ನಡುವೆಯೂ ಪ್ರೇಮ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ರಾಮಚಂದ್ರ ರೆಡ್ಡಿ ಮಹಿಳೆಯ ಮನೆಗೆ ಬಂದು ಹೋಗುತ್ತಿರುವುದು ಹರೀಶ್‌ಗೆ ತಿಳಿದಿತ್ತು. ಈ ಸಂಬಂಧವನ್ನು ಕಡಿದುಕೊಳ್ಳುವಂತೆ ಎಚ್ಚರಿಸಿದ್ದರೂ ರೆಡ್ಡಿ ಕೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಹರೀಶ್, ರಾಮಚಂದ್ರ ರೆಡ್ಡಿಯ ಹತ್ಯೆಗೆ ಸಂಚು ರೂಪಿಸಿದ್ದನು.
