
ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯ ಕೇಳಕಂನ ಕಾಣಿಚಾರ್‌ನಲ್ಲಿ ಮಾದಕ ವ್ಯಸನಕ್ಕೆ ದಾಸನಾಗಿದ್ದ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತನ್ನಿಕುನ್ನು ನಿವಾಸಿ ಗೀತಮ್ಮ ಕೊಲೆಯಾದ ದುರ್ದೈವಿ.
ಗೀತಮ್ಮ ಅವರ ಮಗ ಕ್ರಿಸ್ಟಿ ಬೆಂಗಳೂರಿನಲ್ಲಿ ಬಿಸಿಎ (BCA) ವ್ಯಾಸಂಗ ಮಾಡುತ್ತಿದ್ದನು. ಆದರೆ ಮಾದಕ ವ್ಯಸನದ ಕಾರಣದಿಂದ ಓದನ್ನು ಅರ್ಧಕ್ಕೆ ಬಿಟ್ಟು ಒಂದು ವಾರದ ಹಿಂದೆಯಷ್ಟೇ ಊರಿಗೆ ಮರಳಿದ್ದನು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ತಾಯಿ-ಮಗನ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಕ್ರಿಸ್ಟಿ ತಾಯಿಯ ಮಲಗುವ ಕೋಣೆಯಲ್ಲೇ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಗೀತಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಅವರ ಅಜ್ಜಿ ಕಿರುಚಾಡಿದ್ದಾರೆ.
