April 21, 2026
WhatsApp Image 2026-04-21 at 6.09.04 PM

ಮಂಗಳೂರು: ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಎಸ್‌ಪಿ ಎಸ್.ಎಸ್. ಕಾಶಿ ನೀಡಿರುವ ದೂರಿನ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಲೀಂ ಅವರು ಮೌನವಾಗಿ ನಿರ್ಗಮಿಸಿದ ಘಟನೆ ನಡೆದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಭೆಯ ನಂತರ ಮಾಹಿತಿ ನೀಡಿದ ಡಿಜಿಪಿ ಸಲೀಂ ಅವರು, “ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಪ್ರಗತಿಯ ಬಗ್ಗೆ ಸುದೀರ್ಘ ಸಭೆ ನಡೆಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ತೃಪ್ತಿಕರವಾಗಿದೆ. ಇದೇ ಶಿಸ್ತು ಮತ್ತು ಕಾರ್ಯವೈಖರಿಯನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಪೊಲೀಸ್ ಸಿಬ್ಬಂದಿಯ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಉತ್ತರ ಕರ್ನಾಟಕ ಭಾಗದ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದ್ದು, ನಿಯಮಾನುಸಾರ ಶೇ. 15 ರಷ್ಟು ಸಿಬ್ಬಂದಿಯನ್ನು ಹಂತಹಂತವಾಗಿ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಆದರೆ, ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಎಸ್‌ಪಿ ಎಸ್.ಎಸ್. ಕಾಶಿ ಅವರು ನೀಡಿರುವ ದೂರಿನ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ, ಯಾವುದೇ ಪ್ರತಿಕ್ರಿಯೆ ನೀಡದೆ ಡಿಜಿಪಿ ಸಲೀಂ ಅವರು ಅಲ್ಲಿಂದ ತೆರಳಿದರು. ಇಲಾಖೆಯ ಒಳಗಿನ ಈ ಭಿನ್ನಾಭಿಪ್ರಾಯದ ಬಗ್ಗೆ ಡಿಜಿಪಿ ಅವರು ಯಾವುದೇ ಸ್ಪಷ್ಟನೆ ನೀಡದಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.