April 14, 2026
WhatsApp Image 2026-04-14 at 9.09.47 AM

ಬೆಂಗಳೂರು:ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸುಪ್ರೀಂಕೋರ್ಟ್‌ನಿಂದ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ. ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ, ನಿಯಮಗಳನ್ನು ಗಾಳಿ ತೂರಿ ಅಂದಾಜು 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಖರೀದಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಮಾರುಕಟ್ಟೆಯಲ್ಲಿ ತಲಾ 10 ರಿಂದ 13 ರೂಪಾಯಿಗೆ ಲಭ್ಯವಿರುವ ಬ್ಯಾಗ್‌ಗಳನ್ನು ಸುಮಾರು 52 ರೂಪಾಯಿ ಪಾವತಿಸಿ ಖರೀದಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಹಾಗೂ ವಕೀಲ ರವಿಚಂದ್ರೇಗೌಡ ಆರೋಪಿಸಿದ್ದರು.

ಈ ಮೊದಲು ಪ್ರಕರಣದ ತನಿಖೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ರವಿಚಂದ್ರೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಭ್ರಷ್ಟಾಚಾರವು ಕ್ಯಾನ್ಸರ್ ಮತ್ತು ಪ್ಲೇಗ್ ಇದ್ದಂತೆ. ಅದನ್ನು ಹಾಗೆಯೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ,” ಎಂದು ಗಂಭೀರವಾಗಿ ಹೇಳಿತ್ತು. ಅಲ್ಲದೆ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಏಪ್ರಿಲ್ 1ರಂದು ಆದೇಶ ಹೊರಡಿಸಿತ್ತು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠವು, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸದ್ಯಕ್ಕೆ ನಡೆಯಬೇಕಿದ್ದ ಕಾನೂನು ಕ್ರಮ ಹಾಗೂ ತನಿಖಾ ಪ್ರಕ್ರಿಯೆಗಳಿಗೆ ತಡೆ ಬಿದ್ದಂತಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.