
ಬೆಳಗಾವಿ: ಇತ್ತೀಚಿಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ತಾಯಿ – ಮಗಳು ಉತ್ತೀರ್ಣ ಆಗಿರುವ ಅಪರೂಪದ ಘಟನೆಗೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣ ಸಾಕ್ಷಿ ಆಗಿದೆ.
ಕಲ್ಲೋಳಿ ಗ್ರಾಮದ ಶಿಲ್ಪಾ ಪರಪ್ಪ ಗಿರೆಣ್ಣವರ, ಅವರ ಮಗಳು ಪಲ್ಲವಿ ಗಿರೆಣ್ಣವರ ಏಕಕಾಲಕ್ಕೆ ಪರೀಕ್ಷೆ ಬರೆದು ಪಾಸ್ ಆದವರು. ವೃತ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಆಗಿರುವ ಶಿಲ್ಪಾ ಅವರು ವಡೇರಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಹ್ಯವಾಗಿ ಪರೀಕ್ಷೆ ಬರೆದು, ಕಲಾ ವಿಭಾಗದಲ್ಲಿ ಶೇ.54ರಷ್ಟು ಅಂಕ ಪಡೆದರೆ, ಮಗಳು ಶಿಲ್ಪಾ ನಾಗನೂರಿನ ಅಥರ್ವ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ.78 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಮಾಧ್ಯಮದಲ್ಲಿ ಮಾತನಾಡಿದ ಶಿಲ್ಪಾ ಗಿರೆಣ್ಣವರ ಅವರು, ಈಗ ನನಗೆ 37 ವರ್ಷ. 2005ರಲ್ಲಿ ನನ್ನದು ಎಸ್ಎಸ್ಎಲ್ಸಿ ಮುಗಿದಿತ್ತು. ಅದೇ ವರ್ಷ ಮದುವೆ ಕೂಡ ಆಯಿತು. ಆ ಮೇಲೆ ಓದು ಅರ್ಧಕ್ಕೆ ಬಿಟ್ಟೆ. 2009ರಲ್ಲಿ ಅಂಗನವಾಡಿ ಕಾರ್ಯಕರ್ತೆ ಆಗಿ ನೇಮಕವಾದೆ. ಕಳೆದ 17 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಇತ್ತೀಚೆಗೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಎಲ್ಕೆಜಿ, ಯುಕೆಜಿ ಆರಂಭಿಸುವ ಚಿಂತನೆಯನ್ನು ಸರ್ಕಾರ ನಡೆಸುತ್ತಿದೆ. ಈ ವೇಳೆ ಪಿಯುಸಿ, ಪದವಿ ಆದವರಿಗೆ ಆಧ್ಯತೆ ನೀಡಬಹುದು ಅಂತಾ ಯೋಚಿಸಿ, ಇದೇ ಮೊದಲ ಬಾರಿ ಪರೀಕ್ಷೆ ಬರೆದು ಪಿಯುಸಿ ಪಾಸ್ ಆಗಿದ್ದೇನೆ ಎಂದು ತಿಳಿಸಿದರು.
ಅಂಗನವಾಡಿಯಲ್ಲಿ ಮಕ್ಕಳಿಗೆ ಪಾಠ ಮಾಡಿ, ಮನೆಗೆ ಬಂದು ಮನೆ ಕೆಲಸ ಮಾಡುತ್ತಲೇ ಓದುತ್ತಿದ್ದೆ. ಮಗಳ ಸಹಾಯದಿಂದ ಓದುತ್ತಿದ್ದೆ. ಯಾವ ಪ್ರಶ್ನೆಗಳು ಬರಬಹುದು..? ಹೇಗೆ ಓದಬೇಕು ಎಂಬುದನ್ನು ಮಗಳೇ ನನಗೆ ತಿಳಿಸಿದಳು. ಆರಂಭದಲ್ಲಿ ಪಾಸ್ ಆಗುವ ಅನುಮಾನ ಇತ್ತು. ದಿನಕಳೆದಂತೆ ಓದುತ್ತಾ ಹೋದಂತೆ ಪಾಸ್ ಆಗುವ ವಿಶ್ವಾಸ ಮೂಡಿತು. ಮಗಳು, ಪತಿ ಮತ್ತು ಮನೆಯವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರಿಂದ ಪಾಸ್ ಆಗಿದ್ದೇನೆ. ಎಲ್ಲರಿಗೂ ಖುಷಿ ಆಗಿದೆ. ಮುಂದೆ ಪದವಿ ಕೂಡ ಮುಗಿಸುವ ಆಸೆ ಇದೆ ಎಂದು ತಮ್ಮ ಕನಸನ್ನು ಶಿಲ್ಪಾ ಗಿರೆಣ್ಣವರ ಬಿಚ್ಚಿಟ್ಟರು.
ಶಿಲ್ಪಾ ಪತಿ ಪರಪ್ಪ ಗಿರೆಣ್ಣವರ ಮಾತನಾಡಿ, ‘ಕಲಿಯಲು ವಯಸ್ಸಿನ ಮಿತಿ ಇಲ್ಲ. ಮದುವೆ ಆಗಿ, ಮಕ್ಕಳಾದ ಮೇಲೂ ಓದು ಮುಂದುವರಿಸಬಹುದು ಎಂಬುದಕ್ಕೆ ನನ್ನ ಪತ್ನಿಯೇ ಸಾಕ್ಷಿ. ಆದರೆ, ಅದಕ್ಕೆ ಮನೆಯವರು ಅವಕಾಶ ಮಾಡಿಕೊಡಬೇಕು. ಸದ್ಯ ಪಿಯುಸಿ ಪಾಸ್ ಆಗಿರುವ ಪತ್ನಿಗೆ ಮುಂದೆ ಪದವಿಯನ್ನು ಓದಿಸುತ್ತೇನೆ’ ಎಂದು ಹೇಳಿದರು.
ಪಿಯುಸಿ ಪರೀಕ್ಷೆಯಲ್ಲಿ ಜೊತೆಯಾಗಿ ಗೆದ್ದ ದಕ್ಷಿಣ ಕನ್ನಡದ ತಾಯಿ – ಮಗಳು : ಇದೇ ರೀತಿ ಬಂಟ್ವಾಳ ನಿವಾಸಿಗಳಾದ ಅಮ್ಮ ಮತ್ತು ಮಗಳು ಪಿಯುಸಿ ಪರೀಕ್ಷೆಯಲ್ಲಿ ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಬಿ.ಸಿ.ರೋಡಿನ ಕೈಕಂಬ ನಿವಾಸಿ ಗೃಹಿಣಿ ನೇತ್ರಾವತಿ ವಿ.ಆರ್ ಹಾಗೂ ಮಗಳು ಹೇಮಶ್ರೀ ಆರ್. ತೇರ್ಗಡೆಯಾದ ಸಂತಸದಲ್ಲಿರುವ ತಾಯಿ, ಮಗಳು. ಹೇಮಶ್ರೀ ಬಿ. ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 562 ಅಂಕ ಗಳಿಸುವ ಮೂಲಕ ಕಾಲೇಜಿಗೆ ಟಾಪರ್ ಆಗಿ ಮೂಡಿಬಂದಿದ್ದಾರೆ. ನೇತ್ರಾವತಿ ಅವರು ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದು, 257 ಅಂಕಗಳನ್ನು ಪಡೆದಿದ್ದಾರೆ.
