
ಮಂಗಳೂರು: ಮೀನು ಹಿಡಿಯಲೆಂದು ಫಲ್ಗುಣಿ ನದಿಗೆ ತೆರಳಿದ್ದ ಮೂವರು ಯುವಕರಲ್ಲಿ ಇಬ್ಬರು ದೋಣಿ ಮಗುಚಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್‌ಬೈಲಿನಲ್ಲಿ ನಡೆದಿದೆ.
ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ (28) ಮತ್ತು ರಾಯಲ್ (27) ಎಂಬವರೇ ಮೃತಪಟ್ಟ ದುರ್ದೈವಿಗಳು. ಬುಧವಾರ ನಸುಕಿನ ಜಾವ ಸುಮಾರು 1:30ರ ಹೊತ್ತಿಗೆ ಮೂವರು ಯುವಕರು ಸಣ್ಣ ದೋಣಿಯ ಮೂಲಕ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ನದಿಯ ಮಧ್ಯಭಾಗಕ್ಕೆ ತಲುಪಿದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಬಿದ್ದಿದೆ.
ದೋಣಿಯಲ್ಲಿದ್ದ ಮೂವರೂ ನೀರಿನಲ್ಲಿ ಬಿದ್ದಿದ್ದು, ಈ ಪೈಕಿ ನಿತೇಶ್ (29) ಎಂಬವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈಜಲು ಬಾರದ ಗಣೇಶ್ ಹಾಗೂ ರಾಯಲ್ ನೀರಿನ ಸೆಳವಿಗೆ ಸಿಲುಕಿ ನಾಪತ್ತೆಯಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಸ್ಥಳಕ್ಕಮಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
