February 22, 2026
WhatsApp Image 2026-02-22 at 1.21.18 PM

ಮಂಗಳೂರು: ಲೂಡೋ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಲೂಡೋ ಕಾಯಿ ನುಂಗಿದ ಎಂಟು ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉಳ್ಳಾಲ ಸಮೀಪದ ಕೊಲ್ಯದಲ್ಲಿ ಶನಿವಾರ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು ಉಳಿಯತ್ತಡ್ಕ ಮೂಲದ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ(8) ಮೃತ ಬಾಲಕಿ.

ಬಾಲಕಿಯ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಕೆಲಸದ ಅನುಕೂಲಕ್ಕಾಗಿ ಕುಟುಂಬದೊಂದಿಗೆ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಶನಿವಾರ ಮಧ್ಯಾಹ್ನ ಶಾಲಾ ರಜೆ ಇದ್ದ ಕಾರಣ, ತನುಷ್ಕಾ ತನ್ನ ಅಣ್ಣ ಮತ್ತು ತಂಗಿಯ ಜೊತೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಆಕಸ್ಮಿಕವಾಗಿ ಶಂಕುವಿನಾಕಾರದ ಪ್ಲಾಸ್ಟಿಕ್ ಲೂಡೋ ಕಾಯಿಯನ್ನು ನುಂಗಿದ್ದಾಳೆ. ತಕ್ಷಣವೇ ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿದೆ.

ಗಾಬರಿಗೊಂಡ ತಾಯಿ ನೆರೆಹೊರೆಯವರ ಸಹಾಯದೊಂದಿಗೆ ಮಗುವನ್ನು ತಕ್ಷಣವೇ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಶ್ವಾಸಕೋಶದ ಭಾಗದಲ್ಲಿ ಪ್ಲಾಸ್ಟಿಕ್ ಆಟದ ಕಾಯಿ ಸಿಲುಕಿರುವುದು ಪತ್ತೆಯಾಗಿದೆ.

ತನುಷ್ಕಾ ತೊಕ್ಕೊಟ್ಟುವಿನ ಸೇಂಟ್ ಸೆಬಾಸ್ಟಿಯನ್ ಪ್ರೌಢಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಓದಿನಲ್ಲಿ ಅತ್ಯಂತ ಚುರುಕಾಗಿದ್ದಳು. ಮಗಳ ಹಠಾತ್ ಸಾವು ಪೋಷಕರಿಗೆ ಆಘಾತ ನೀಡಿದ್ದು, ಘಟನೆಯ ಬಳಿಕ ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *

You cannot copy content of this page.