
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣದ ಮರು ತನಿಖೆಗೆ ಎಸ್.ಐ.ಟಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ತಂಡದಲ್ಲಿ ಉಡುಪಿ ಜಿಲ್ಲಾ ಎಸ್.ಪಿ ಹರಿರಾವ್ ಶಂಕರ್ ಐಪಿಎಸ್, ಡಿವೈಎಸ್‌ಪಿ ಎಂಆರ್ ಹರೀಶ್ ಅವರಿದ್ದಾರೆ.
2022ರ ಡಿ.18ರಂದು ಶಿಬಾಜೆಯಲ್ಲಿ ಕೆಲಸ ಮಾಡುತ್ತಿದ್ದ ತೋಟದ ಒಳಗೆ ಶ್ರೀಧರ ಅವರ ಕೊಲೆ ನಡೆದಿತ್ತು.ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿರುವ ಆರೋಪ ಆರಂಭದಿಂದಲೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ದಲಿತ ಸಂಘಟನೆಗಳು ಬೃಹತ್ ಹೋರಾಟಗಳನ್ನು ನಡೆಸಿದ್ದರು. ಆದರೆ ಶ್ರೀಧರ ಅವರ ಕೊಲೆ ಪ್ರಕರಣದ ಆರೋಪಿಗಳು ಪತ್ತೆಯಾಗಲೇ ಇಲ್ಲ.ಪೊಲೀಸ್ ತನಿಖೆ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಹರೀಶ್ ಮುಗೇರ ಎಂಬವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಕೊಂಡಿದ್ದರು. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಬಳಿಕ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಇದೀಗ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂಎ ಸಲೀಂ ಅವರು ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
