April 20, 2026
WhatsApp Image 2026-02-06 at 9.32.39 AM

ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನೇ ಟಾರ್ಗೆಟ್ ಮಾಡಿ ಪುಸಲಾಯಿಸಿ ಹೆಚ್ಚು ಹಣ ಇನ್ವೆಸ್ಟ್‌ಮೆಂಟ್ ಮಾಡುವಂತೆ ಮಾಡಿ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಒಟ್ಟು 11 ಆರೋಪಿಗಳನ್ನು ಬಂಧಿಸಿ, ಇವರಿಂದ 21 ಲ್ಯಾಪ್ಟ್ಯಾಪ್‌, ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು  ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಂಧಿತ ಆರೋಪಿಗಳನ್ನು ಗುಜರಾತಿನ ವಿಕ್ರಂ(25), ಪಶ್ಚಿಮಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ(21), ಜಾರ್ಖಂಡ್‌ನ ಪುಪ್ಲ ಶಿವ ಕುಮಾರ್ ರಾವ್ (32), ರಾಜೇಶ್ ಮಂಡನ್‌(30), ಉತ್ತರ ಪ್ರದೇಶದ ಗೌರವ್ ಪಾಂಡೆ (24), ಹರ್ಷ್ ಮಿಸ್ರಾ (22), ಮೊಹಮ್ಮದ್ ಅಕೀಬ್ ಅಲಿ(27), ಬಿಹಾರದ ರಾಜೀವ್ ರಂಜನ್ ಕುಮಾರ್ (30), ಜಾರ್ಖಂಡ್‌ನ ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ನೌಶಾದ್ ಅಲಿ (34) ರಾಜಸ್ಥಾನದ ಓಂ ಪ್ರಕಾಶ್  ಯಾದವ್ (37)ಎಂದು ಗುರುತಿಸಲಾಗಿದೆ.

ಬಂಧಿತರು ವಂಚನೆ, ಫೋನ್ ಕರೆ, ಹಣದ ನಿರ್ವಹಣೆ ಹೀಗೆ ಎಲ್ಲವನ್ನೂ ಈ ಗ್ಯಾಂಗ್‌ ನ ತಂಡವೇ ನಿರ್ವಹಣೆ ಮಾಡುತ್ತಿದ್ದು, ವಂಚಕರ ತಂಡದಲ್ಲಿ ಒಟ್ಟು 16 ಭಾರತೀಯರು ಹಾಗೂ ಚೀನಾದ ವಂಚಕರೂ ಇದ್ದು, ನೇಪಾಳ ಪೊಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿದ್ದಾರೆ. 5 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದರು. ಆರೋಪಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ ಟಾಪ್‌ಗಳನ್ನು ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿದ್ದು, ಸದ್ರಿ ಬ್ಯಾಂಕ್  ಖಾತೆಗಳ ಮೇಲೆ ಒಟ್ಟು 4580ಕ್ಕೂ ಹೆಚ್ಚು ಎನ್‌ ಸಿ ಆರ್‌ ಪಿ ಪೋರ್ಟಲ್‌ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1 ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ 30 ಕೋಟಿ 70 ಲಕ್ಷ ಹಣ ವರ್ಗಾವಣೆ ಮಾಡಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಬೇಕಾಗಿದೆ ಎಂದು ವಿವರಿಸಿದರು. ಆರೋಪಿಗಳ ವಿರುದ್ಧ 35 ಎಫ್‌ಐಆರ್ ದಾಖಲಾಗಿದೆ. ಈ ಗ್ಯಾಂಗ್ ಎರಡು ರೀತಿಯಲ್ಲಿ ಕೆಲಸಮಾಡುತ್ತಿದ್ದು, ಒಂದು ತಂಡ ವಿಯೆಟ್ನಾಂ, ಕಾಂಬೋಡಿಯಾದಿಂದ ಕರೆ ಮಾಡಿದರೆ, ಇನ್ನೊಂದು ತಂಡ ನೇಪಾಳ, ದುಬೈನಲ್ಲಿದ್ದು ಕರೆ ಮಾಡುತ್ತಿತ್ತು. ಇವರು ನಿರ್ವಹಣೆ ಮಾಡಿದ ಬ್ಯಾಂಕ್ ಅಕೌಂಟ್ ಎಲ್ಲವೂ ಇಂಡಿಯನ್‌ ಬ್ಯಾಂಕ್‌ಗಳೇ ಆಗಿವೆ. ಇವರೆಲ್ಲರೂ ಕೆಲಸಕ್ಕೆ ವಿದೇಶಕ್ಕೆ ಹೋದಾಗ ಸರಿಯಾದ ಡ್ಯಾಕುಮೆಂಟ್ ಇಲ್ಲ ಎಂದು ಪತ್ತೆ ಮಾಡಿ ಇವರನ್ನು ಬಂಧಿಗಳನ್ನಾಗಿಸಿ ಅವರಿಂದಲೇ ಈ  ಕೆಲಸ ಮಾಡಿಸುತ್ತಿದ್ದರು. ಈಗಾಗಲೇ ಜಿಲ್ಲೆಯಿಂದ ಹೋಗಿದ್ದ 6 ಜನರನ್ನು ರೆಸ್ಕ್ಯೂ ಮಾಡಲಾಗಿದೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಿದೇಶಕ್ಕೆ ಉದ್ಯೋಗಕ್ಕೆ ಹೋಗುವವರು, ಇನ್ವೆಸ್ಟ್‌ ಮಾಡುವವರು ಮುಂದಿನ ದಿನಗಳಲ್ಲಿ ಜಾಗೃತೆ ಆಗಿರಬೇಕು ಎಂದು ಎಚ್ಚರಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.