
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ನಗದು ಸಹಿತ ಸುಮಾರು 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕಾಪು ಕೋಟೆ ಗ್ರಾಮದ ಜೋಗಿ ಕಂಪೌಂಡ್ ನಿವಾಸಿ ಗಾಯತ್ರಿ ಆರ್. ಜೋಗಿ ಬ್ಯಾಗ್ ನಲ್ಲಿದ್ದ 10ಸಾವಿರ ರೂ. ನಗದು ಹಾಗೂ 12.80 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಗಾಯತ್ರಿ ತಮ್ಮ ಪುತ್ರಿ ರಜಿತಾ, ಅವರ 7 ತಿಂಗಳ ಶಿಶು ಹಾಗೂ ತಾಯಿ ತಾರಾ ಜೋಗಿಯೊಂದಿಗೆ ನ.24ರಂದು ಬೆಳಗ್ಗೆ 10ಗಂಟೆಗೆ ಮನೆಯಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬರುವಾಗ ತಮ್ಮ ಬ್ಯಾಗ್‌ನಲ್ಲಿ ಪುತ್ರಿ, ಶಿಶುವಿಗೆ ಹಾಗೂ ತನಗೆ ಸೇರಿದ 40 ಪವನ್ ಚಿನ್ನಾಭರಣಗಳನ್ನು ಎರಡು ಪರ್ಸ್‌ಗಳಲ್ಲಿ ಇಟ್ಟು 10 ಸಾವಿರ ನಗದನ್ನು ಇನ್ನೊಂದು ಬ್ಯಾಗ್‌ಗಳಲ್ಲಿಟ್ಟು ಬಂದಿದ್ದರು.
ಮಧ್ಯಾಹ್ನ 1.45ರ ಸುಮಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಕಾರನ್ನು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಬಳಿಕ ದೇವರ ದರ್ಶನ ಮುಗಿಸಿ ಮಧ್ಯಾಹ್ನ 2.30ಸುಮಾರಿಗೆ ಬ್ಯಾಗನ್ನು ನೋಡಿದಾಗ, ಜಿಪ್ ತೆರೆದುಕೊಂಡಿರುವುದು ಕಂಡುಬಂದಿತ್ತು. ಬ್ಯಾಗ್ ನಲ್ಲಿಟ್ಟಿದ್ದ ಸುಮಾರು 40 ಪವನ್ ಚಿನ್ನಾಭರಣಗಳನ್ನು ಇರಿಸಿದ್ದ ಎರಡು ಪರ್ಸ್ ಹಾಗೂ ನಗದು ನಾಪತ್ತೆಯಾಗಿತ್ತು. ಕೂಡಲೇ ಪಾರ್ಕ್ ಮಾಡಿದ್ದ ಕಾರಿನತ್ತ ತೆರಳಿ ಹುಡುಕಾಡಿದಾಗ ಅಲ್ಲಿಯೂ ಚಿನ್ನಾಭರಣ ಪತ್ತೆಯಾಗಿರಲಿಲ್ಲ. ದೇವರ ದರ್ಶನ ಸಂದರ್ಭದಲ್ಲಿಯೇ ಬ್ಯಾಗಿನಲ್ಲಿದ್ದ ಚಿನ್ನಾಭರಣವನ್ನು ಯಾರೋ ಕಳವುಗೈದಿರಬೇಕೆಂದು ಗಾಯತ್ರಿ ಜೋಗಿ ಅವರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.
