
ಕುಂದಾಪುರ: ಜೀವನೋಪಾಯಕ್ಕಾಗಿ ಇರಿಸಿಕೊಂಡ ಅಂಗಡಿಗೆ ದ್ವೇಷದಿಂದ ಬೆಂಕಿಯಿಟ್ಟ ಘಟನೆ ಕುಂದಾಪುರದ ಜಪ್ತಿಯಲ್ಲಿ ಸಂಭವಿಸಿದೆ. ಅಂಬಿಕಾ ಎಂಬ ಮಹಿಳೆ ತನ್ನ ಪತಿಯೊಂದಿಗೆ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದನ್ನು ಸಹಿಸದ ಹತ್ತಿರದಲ್ಲಿರುವ ಮತ್ತೊಂದು ಅಂಗಡಿಯ ಮಾಲಕ ಸಂದೇಶ ಬೆಂಕಿ ಕೊಟ್ಟಿದ್ದಾನೆ ಎನ್ನಲಾಗಿದೆ. ತಗಡು ಶೀಟಿನ ಸಣ್ಣ ಅಂಗಡಿಗೆ ಬೆಂಕಿ ತಗುಲಿದ್ದರಿಂದ, ಅಂಗಡಿಯಲ್ಲಿದ್ದ ಫ್ರಿಜ್, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ. ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
