
ಬೆಳ್ತಂಗಡಿ : ಕರ್ನಾಟಕ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಅಂತಿಮ ದಿನಾಂಕ ಮುಕ್ತಾಯವಾಗಿದ್ದು, ನಾಮಪತ್ರ ವಾಪಸ್ ತೆಗೆದುಕೊಳ್ಳಲು ಸೋಮವಾರ ( april 24) ಕೊನೆಯ ದಿನವಾಗಿದೆ. ಸೋಮವಾರದ ನಂತರ ಕಣದಲ್ಲಿ ಯಾರೆಲ್ಲಾ ಉಳಿಯಲಿದ್ದಾರೆ ಎನ್ನುವ ಸ್ಪಷ್ಟತೆ ಸಿಗಲಿದ್ದು, ರಾಜಕೀಯ ಅಖಾಡ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ. ಬೆಳ್ತಂಗಡಿಯಲ್ಲಿ ಅಭ್ಯರ್ಥಿಗಳು ಗ್ರಾಮಗ್ರಾಮಕ್ಕೆ ತೆರಳಿ ಮತಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ಸಹ ಬಹಳಷ್ಟು ಹುಮ್ಮಸ್ಸಿನಿಂದ ಮತಪ್ರಚಾರದಲ್ಲಿ ತೊಡಗಿದ್ದಾರೆ. ಬೆಳ್ತಂಗಡಿ ವಿಧಾನಸಭೆಯ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಯುವ ನಾಯಕರಾಗಿದ್ದು, ಇವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಹೈಕೋರ್ಟ್‌ನ ನ್ಯಾಯವಾದಿಗಳಾಗಿದ್ದು, ಮತದಾರರ ಒಲವು ಯಾವ ಕಡೆ ಇದೆ ಅನ್ನುವುದು ಮೇ 13ರ ಚುನಾವಣೆ ಫಲಿತಾಂಶದ ದಿನ ಗೊತ್ತಾಗಲಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ದಿನಾಂಕ ಏಪ್ರಿಲ್ 20ಕ್ಕೆ ಕೊನೆಗೊಂಡಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮುಗಿದಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
