ಐಸ್ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅದ್ರಲ್ಲೂ ಮಕ್ಕಳಿಗೆ ಮೊದಲ ಬಾರಿಗೆ ಐಸ್ಕ್ರೀಮ್ ಕೊಟ್ಟಾಗ ಅವರು ಅದನ್ನು ಚಪ್ಪರಿಸಿ ತಿನ್ನೋದನ್ನ ನೋಡೋದೇ ಒಂದು ರೀತಿ ಖುಷಿ.
ಆದ್ರೆ ಚಿಕ್ಕ ಮಕ್ಕಳಿಗೆ ಐಸ್ಕ್ರೀಮ್ ಕೊಡಬಾರದು ಅಂತಾರೆ. ಹಾಗಾದ್ರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಈಸ್ಕ್ರೀಮ್ ಕೊಡಬೇಕು? ಒಂದು ವರ್ಷದ ಕೆಳಗಿನ ಮಕ್ಕಳಿಗೆ ಯಾಕೆ ಐಸ್ಕ್ರೀಮ್ ಕೊಡಬಾರದು? ಮಕ್ಕಳಿಗೆ ಐಸ್ಕ್ರೀಮ್ ಕೊಡೋ ವಿಧಾನ ಹೇಗೆ ಎಂಬುವುದರ ಬಗ್ಗೆ ವಿವರವಾಗಿ ನೋಡೋಣ.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಐಸ್ಕ್ರೀಮ್ ಕೊಡಬಹುದು? ಹನ್ನೆರಡು ತಿಂಗಳು ಅಂದ್ರೆ ಒಂದು ವರ್ಷ ತುಂಬಿದ ಮೇಲೆ ಮಕ್ಕಳಿಗೆ ಐಸ್ಕ್ರೀಮ್ ಕೊಡಬಹುದು. ಐಸ್ಕ್ರೀಮ್ ಹಾಲು ಹಾಗೂ ಕ್ರೀಮ್ನಿಂದ ಮಾಡಲ್ಪಟ್ಟಿರಬಹುದು, ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಪಾಶ್ಚರೀಕರಿಸಲ್ಪಟ್ಟಿದೆಯಾದರೂ ಶಿಶುಗಳ ಆರೋಗ್ಯಕ್ಕೆ ಅದರಲ್ಲಿರುವ ಪ್ರೋಟೀನ್, ಖನಿಜ ಹಾಗೂ ಇತರ ಪದಾರ್ಥಗಳು ಹಾನಿ ಮಾಡುವ ಸಾಧ್ಯತೆಗಳಿದೆ. ಒಂದು ವರದಿಯ ಪ್ರಕಾರ ಮಂಜುಗಡ್ಡೆಯಿಂದ ತಯಾರಿಸಲಾದ ಪದಾರ್ಥಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನೂ ಐಸ್ಕ್ರೀಮ್ನಲ್ಲಿ ಫುಡ್ ಕಲರ್ ಹಾಗೂ ಕೆಲವೊಂದು ಕೆಮಿಕಲ್ಗಳನ್ನು ಸೇರಿಸಲಾಗುತ್ತದೆ. ಹಾಗೂ ಅದ್ರಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇರೋದಿಲ್ಲ. ಹೀಗಾಗಿ ಮಕ್ಕಳಿಗೆ ಐಸ್ಕ್ರೀಮ್ ಕೊಡಬೇಕು ಅನ್ನುವವರು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.