

ಕರ್ನಾಟಕದಲ್ಲಿ ಕಂಡು ಕೇಳರಿಯದ ಮತ್ತು ಅತ್ಯಂತ ಕ್ರೂರವಾಗಿ ಗೋವುಗಳ ಮೇಲೆ ಭೀಭತ್ಸ ಹಿಂಸೆ ಆಕ್ರಮಣಗಳು ನಡೆಯುತ್ತಿದ್ದು ಸಮಸ್ತ ಗೋಭಕ್ತರು ಸನಾತನ ಧರ್ಮೀಯರು ತೀವ್ರ ಸಂಕಟ ದುಃಖ ಅನುಭವಿಸುವಂತಾಗಿದೆ . ಆದರೆ ಗೋವುಗಳ ಮೇಲೆ ದುರಾಕ್ರಮಣಗೈಯುವವರಿಗೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ .
ಹಿಂದೂ ಶ್ರದ್ಧೆಯಂತೆ ಗೋವುಗಳ ಮೇಲೆ ಈ ರೀತಿಯ ಹಿಂಸೆ , ಗೋವಧೆ , ದುರಾಕ್ರಮಣಗಳು ಗೋವಿನ ಅರ್ತನಾದಗಳು ಯಾವ ಕಾರಣಕ್ಕೂ ಶ್ರೇಯಸ್ಸನ್ನುಂಟುಮಾಡದು ಬದಲಾಗಿ ಅದು ನೆಲದ ದುರ್ಭಿಕ್ಷೆ , ಅಶಾಂತಿ , ಕ್ಷಾಮಡಾಮರಗಳಿಗೆ ಕಾರಣವಾಗುತ್ತವೆ .
ಸದ್ಯ ನಡೆಯುತ್ತಿರುವ ಬೆಳವಣಿಗೆಯಿಂದ ಅಕ್ಷರಶಃ ಆಘಾತಗೊಂಡಿರುವ ಹಿಂದು ಸಮಾಜ ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಾಗಿದೆ . ಗೋಹತ್ಯೆ ಗೋವುಗಳ ಮೇಲಿನ ಕ್ರೂರ ಪೈಶಾಚಿಕ ದೌರ್ಜನ್ಯಗಳ ಅಂತ್ಯವಾಗಲೇ ಬೇಕು .ಆ ಸಂಬಂಧ ನಾಡಿನ ಸಮಸ್ತರಿಗೂ ದೇವರು ಸದ್ಬುದ್ಧಿಯನ್ನು ನೀಡಬೇಕು . ಗೋವುಗಳಿಗೆ ನೆಮ್ಮದಿಯ ಸುರಕ್ಷಿತ ಬದುಕು ಲಭಿಸಬೇಕು . ಆದರೆ ಶಾಸನಗಳಿಂದ ಗೋವುಗಳಿಗೆ ನ್ಯಾಯ ಒದಗಿಸುವ ಸ್ಥಿತಿಯಲ್ಲಿ ನಾವಿಲ್ಲ ಆದ್ದರಿಂದ ಭಗವಂತನಿಗೇ ಶರಣಾಗಬೇಕಾಗಿದೆ .
ಈ ಉದ್ದೇಶಕ್ಕಾಗಿ ಇದೇ ಬರುವ ಜನವರಿ 23 ರಿಂದ ಆರಂಭಿಸಿ ಜನವರಿ 29 ರ ತನಕ ನಾಡಿನಾದ್ಯಂತ ಕೋಟಿವಿಷ್ಣುಸಹಸ್ರನಾಮಪಾರಾಯಣ ಅಭಿಯಾನ ಸಂಕಲ್ಪಿಸುತ್ತಿದ್ದೇವೆ .
ಯಾವುದೇ ಜಾತಿ ಮತ ಬೇಧವಿಲ್ಲದೇ ಎಲ್ಲ ಜಾತಿ ಸಮುದಾಯಗಳ ಪುರುಷರೂ ಮಹಿಳೆಯರೂ ಯುವಕ ಯುವತಿಯರೂ ಹೀಗೆ ಸನಾತನ ಧರ್ಮಶ್ರದ್ಧೆ , ಗೋವುಗಳ ಮೇಲೆ ಪ್ರೀತಿ ಭಕ್ತಿಯುಳ್ಳ ಗೋವಿನ ಹಾಲು ಕುಡಿದು ಋಣಿಗಳಾಗಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು .
ಪ್ರತೀ ಮನೆ ಮನೆಗಳಲ್ಲಿ ಒಂದು ವಾರ ಪರ್ಯಂತ ಸಾಧ್ಯವಾದರೆ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪ ಇರಿಸಿ ಭಕ್ತಿಯಿಂದ ಗೋವುಗಳ ಮೇಲೆ ಹಿಂಸಾಚಾರ ಗೋಹತ್ಯೆಯಂಥಹ ದುಷ್ಕೃತ್ಯಗಳ ಅಂತ್ಯ , ಆ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಸದ್ಬುದ್ಧಿ ಮತ್ತು ಗೋವುಗಳಿಗೆ ನೆಮ್ಮದಿ ಮತ್ತು ಸುರಕ್ಷಿತ ಬದುಕು ಒದಗುವಂತಾಗಬೇಕು ಆ ಮೂಲಕ ನಾಡಿನಲ್ಲಿ ಶಾಂತಿ ಸುಭಿಕ್ಷೆ ಸಮೃದ್ಧಿಯಾಗಬೇಕೆಂದು ಪ್ರಾರ್ಥಿಸಿ ವಿಷ್ಣುಸಹಸ್ರನಾಮವನ್ನು ಪಠಿಸಬೇಕು . ಪಾರಾಯಣದ ನಂತರವೂ ಇದೇ ಪ್ರಾರ್ಥನೆಯನ್ನು ದೇವರಿಗೆ ಸಲ್ಲಿಸಬೇಕು . 29 ನೇ ತಾರೀಖಿನಂದು ಆಯಾ ಊರಿನ ಮಠ ಮಂದಿರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ವನ್ನು ನಡೆಸಿ ಅಭಿಯಾನವನ್ನು ಸಂಪನ್ನಗೊಳಿಸುವುದು .
ಈ ಅಭಿಯಾನಕ್ಕೆ ನಾಡಿನಸಮಸ್ತ ಮಠಾಧೀಶರು ,ಸಾಧು ಸಂತರು , ಭಜನಾ ಮಂದಿರಗಳು , ಪಾರಾಯಣ ಮಂಡಳಿಗಳು ವಿವಿಧ ಜಾತಿ ಸಂಘಟನೆಗಳು ಹಿಂದು ಸಂಘಟನೆಗಳು ಸಹಭಾಗಿಗಳಾಗಬೇಕು .ಎಲ್ಲ ಮಠಾಧೀಶರುಗಳು ತಮ್ಮ ಅಭಿಮಾನಿಗಳು ಭಕ್ತರು ಶಿಷ್ಯರಿಗೆ ಈ ಬಗ್ಗೆ ಒಂದು ಕರೆಕೊಡಬೇಕು ಎಂದು ಆಗ್ರಹಿಸಿದರು.