May 29, 2026
image (38)

ಸೂಪರ್ ಹಿಟ್ ‘ಧುರಂಧರ್’ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೊಹ್ರೆ  ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಸೈನಿ ಎಸ್. ಜೊಹ್ರೆಯನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ, ಚಿತ್ರದ ಆಂತರಿಕ ಲೈಂಗಿಕ ಕಿರುಕುಳ ತಡೆ ಸಮಿತಿಯು ನಡೆಸಿದ ತನಿಖೆಯಲ್ಲಿ ಜೊಹ್ರೆ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹಾಗಾಗಿ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯ ಮುಂಬರುವ ಸಿನಿಮಾದಿಂದ ಆತನ ಹೆಸರನ್ನು ತೆಗೆದುಹಾಕಿದೆ.

‘ಮಿಡ್-ಡೇ’ ವರದಿಯ ಪ್ರಕಾರ, ಸಂತ್ರಸ್ತೆ ಈ ಹಿಂದೆ ನಿರ್ಮಾಪಕ ಲೋಕೇಶ್ ಧರ್ ಮತ್ತು ನಿರ್ದೇಶಕ ಆದಿತ್ಯ ಧರ್ ಒಡೆತನದ ‘B62 ಸ್ಟುಡಿಯೋಸ್’ ಸಂಸ್ಥೆಗೆ ಸೈನಿ ಎಸ್. ಜೊಹ್ರೆ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದರು. ಲೈಂಗಿಕ ಕಿರುಕುಳದ ವಿರುದ್ಧ ಕಠಿಣ ನಿಲುವು ಹೊಂದಿರುವ ‘B62 ಸ್ಟುಡಿಯೋಸ್’ ಸಂಸ್ಥೆಯು 2025ರ ಅಕ್ಟೋಬರ್ ತಿಂಗಳಲ್ಲಿ ದೂರು ಸ್ವೀಕರಿಸಿದ ತಕ್ಷಣವೇ POSH ಸಮಿತಿಯನ್ನು ಸಕ್ರಿಯಗೊಳಿಸಿತ್ತು.

ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿದ ಸಮಿತಿಯು ಅತ್ಯಂತ ಕೂಲಂಕಷವಾಗಿ ತನಿಖೆ ನಡೆಸಿದೆ. ಸುಮಾರು ಆರು ತಿಂಗಳ ಕಾಲ ನಡೆದ ಈ ಸುದೀರ್ಘ ತನಿಖೆಯು 2026ರ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಂಡಿದ್ದು, ಸೈನಿ ಎಸ್. ಜೊಹ್ರೆ ಅಪರಾಧಿ ಎಂಬ ತೀರ್ಮಾನಕ್ಕೆ ಸಮಿತಿ ಬಂದಿದೆ. ತನಿಖಾ ವರದಿಯ ಪ್ರಕಾರ, ಆತ ಎರಡು ಪ್ರಮುಖ ಆರೋಪಗಳಲ್ಲಿ (ಲೈಂಗಿಕ ದೌರ್ಜನ್ಯ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ) ಅಪರಾಧ ಎಸಗಿರುವುದು ದೃಢಪಟ್ಟಿದೆ.

ಏನಿದು ಘಟನೆ? ‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಚಂಡೀಗಢದ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿತ್ತು. ಸೈನಿ ಜೊಹ್ರೆ ತನ್ನನ್ನು ಹೋಟೆಲ್ ರೂಮಿಗೆ ಕರೆಸಿಕೊಂಡು, ಪಾನೀಯದಲ್ಲಿ ಮಾದಕ ಪದಾರ್ಥವನ್ನು ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿ, ಹಲ್ಲೆ ನಡೆಸಿ, ಕಾನೂನುಬಾಹಿರವಾಗಿ ಕೊಠಡಿಯಲ್ಲಿ ಕೂಡಿ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ದೂರಿನ ಅನ್ವಯ ಚಂಡೀಗಢ ಪೊಲೀಸರು ಸೈನಿ ಜೊಹ್ರೆನನ್ನು ಬಂಧಿಸಿದ್ದರು. ಆದರೆ, ನಂತರ ಸ್ಥಳೀಯ ಜಿಲ್ಲಾ ನ್ಯಾಯಾಲಯವು ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಚಿತ್ರತಂಡದ ಆಂತರಿಕ ಸಮಿತಿಯೇ ಆತನನ್ನು ಅಪರಾಧಿ ಎಂದು ಘೋಷಿಸಿರುವುದರಿಂದ ಆತನಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

About The Author

Leave a Reply

Your email address will not be published. Required fields are marked *

You cannot copy content of this page.