May 29, 2026
image (26)

ಮಂಗಳೂರು: ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ‘ಭಾಗೀರಥಿ’ ಹೆಸರಿನ ಮೀನುಗಾರಿಕಾ ದೋಣಿ ಮಂಗಳೂರು ಕರಾವಳಿಯಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ಮುಳುಗಿದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಎಲ್ಲಾ ಮೀನುಗಾರರನ್ನು ಹತ್ತಿರದ ದೋಣಿಗಳ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಈ ದೋಣಿ ಬ್ರಹ್ಮಾವರದ ಮಾಬುಕಲ ನಿವಾಸಿ ಜೈ ಸಾಲಿಯಾನ್ ಅವರಿಗೆ ಸೇರಿದ್ದು, ಮೇ 24ರಂದು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿತ್ತು. ಮೇ 26ರಂದು ಬೆಳಿಗ್ಗೆ ಮಂಗಳೂರಿನಿಂದ ಸುಮಾರು 8 ರಿಂದ 10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಗೇರ್‌ಬಾಕ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಬೆಳಿಗ್ಗೆ 9.30ರ ಸುಮಾರಿಗೆ ದೋಣಿ ದುರಸ್ತಿಗಾಗಿ ಮಂಗಳೂರು ಹಳೆಯ ಬಂದರಿಗೆ ಕರೆತರಲಾಗಿತ್ತು. ದುರಸ್ತಿ ಕಾರ್ಯದ ನಂತರ ಅದೇ ದಿನ ರಾತ್ರಿ ಸುಮಾರು 9.30ಕ್ಕೆ ದೋಣಿ ಅಲೈವ್ ಗೇಟ್ ಮೂಲಕ ಮತ್ತೆ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಪುನರಾರಂಭಿಸಿತ್ತು.

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಡಿಯಲ್ಲಿ ಇದ್ದ ಮತ್ತೊಂದು ಮುಳುಗಿದ ದೋಣಿಯ ಭಾಗಕ್ಕೆ ‘ಭಾಗೀರಥಿ’ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ಡಿಕ್ಕಿಯ ಪರಿಣಾಮ ದೋಣಿಯೊಳಗೆ ನೀರು ನುಗ್ಗತೊಡಗಿದ್ದು, ಕೆಲವೇ ಹೊತ್ತಿನಲ್ಲಿ ದೋಣಿ ಮುಳುಗುವ ಸ್ಥಿತಿಗೆ ತಲುಪಿದೆ.

ರಾತ್ರಿ ಸುಮಾರು 12.30ರ ವೇಳೆಗೆ ದೋಣಿ ಸಂಪೂರ್ಣ ಮುಳುಗುವ ಹಂತದಲ್ಲಿದ್ದಾಗ, ಹತ್ತಿರದಲ್ಲಿದ್ದ ನಾಲ್ಕು ಮೀನುಗಾರಿಕಾ ದೋಣಿಗಳ ಸಿಬ್ಬಂದಿ ತಕ್ಷಣ ನೆರವಿಗೆ ಧಾವಿಸಿ ದೋಣಿಯಲ್ಲಿದ್ದ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮುಳುಗುತ್ತಿದ್ದ ದೋಣಿಯನ್ನು ಹಗ್ಗಗಳಿಂದ ಕಟ್ಟಿ, ಇನ್ನೆರಡು ದೋಣಿಗಳ ಸಹಾಯದಿಂದ ಮಂಗಳೂರು ಹಳೆಯ ಬಂದರು ಡಾಕ್ ಬಳಿಯ ಹೊಯಿಗೆ ಬಜಾರ್ ಪ್ರದೇಶಕ್ಕೆ ಎಳೆದುಕೊಂಡು ಬರಲಾಯಿತು. ಆದರೆ ಅಷ್ಟರಲ್ಲೇ ದೋಣಿಯ ಎಂಜಿನ್ ಒಳಗೆ ನೀರು ನುಗ್ಗಿದ್ದರಿಂದ ಅದು ಸಂಪೂರ್ಣ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಎರಡು ದಿನಗಳ ಮೀನುಗಾರಿಕೆಯ ಬಳಿಕ ಸಂಗ್ರಹಿಸಿದ್ದ ಸುಮಾರು ರೂ. 1 ಲಕ್ಷ ಮೌಲ್ಯದ ಮೀನುಗಳು ನಾಶವಾಗಿವೆ. ಜೊತೆಗೆ ಸುಮಾರು 2,500 ಲೀಟರ್ ಡೀಸೆಲ್, ಜಿಪಿಎಸ್, ಎಐಎಸ್ ಸೇರಿದಂತೆ ನಾವಿಗೇಷನ್ ಉಪಕರಣಗಳು, ವೈರ್‌ಲೆಸ್ ಸೆಟ್, ಮೀನು ಶೋಧಕ ಸಾಧನಗಳು ಹಾಗೂ ಮೀನುಗಾರಿಕಾ ಬಲೆಗಳು ಹಾನಿಗೊಳಗಾಗಿವೆ. ದೋಣಿ ದುರಸ್ತಿಗೆ ಬಾರದ ಮಟ್ಟಿಗೆ ಹಾನಿಯಾಗಿದ್ದು, ಒಟ್ಟು ಸುಮಾರು ರೂ. 25 ಲಕ್ಷ ನಷ್ಟ ಸಂಭವಿಸಿದೆ ಎಂದು ದೋಣಿ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

You cannot copy content of this page.