ದಾವಣಗೆರೆ: ಮುಂಬೈ ಮೂಲದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಳೆದ ಜನವರಿ 23ರಂದು ತಡರಾತ್ರಿ ಈ ಘಟನೆ ನಡೆದಿದ್ದು, ಜಗಳ ನಡೆದ ಹಿನ್ನೆಲೆ ವೇಶ್ಯಾವಾಟಿಕೆಯ ಅಸಲಿ ಕಹಾನಿ ಬಯಲಿಗೆ ಬಂದಿದೆ.
ಅಂದ ಹಾಗೆ ಮುಂಬೈ ಮೂಲದ ಯೋಗಿಶ್, ಕುಮಾರ್ ನಾಯ್ಕ್ ಮತ್ತು ಹೇಮರಾಜ್ ಎಂಬುವರಿಂದ ಈ ಕೃತ್ಯ ನಡೆದಿದ್ದು, ಯೋಗೀಶ್ ಜೊತೆ ಈ ಮೊದಲೇ ಪೋನ್ ಸಂಪರ್ಕದಲ್ಲಿದ್ದ ಮುಂಬೈ ಮೂಲದ ಯುವತಿಯರು, ಹಣ ಸಂಪಾದಿಸುವ ಸಲುವಾಗಿ ಯೋಗಿಶ್ ಯಾರನ್ನೇ ಹೇಳಿದರೂ ಅವರೊಂದಿಗೆ ಹೋಗಲು ತಯಾರಾಗಿದ್ದರು. ಇದೇ ಉದ್ದೇಶದಿಂದ ಆ ಯುವತಿಯರನ್ನು ಮುಂಬೈನಿಂದ ದಾವಣಗೆರೆಗೆ ಕರೆ ತರಲಾಗಿತ್ತು ಎಂದು ತಿಳಿದು ಬಂದಿದೆ.
ತಾನು ಹೇಳಿದ ವ್ಯಕ್ತಿಗಳೊಂದಿಗೆ ವೇಶ್ಯಾವಾಟಿಕೆಗೆ ಹೋಗುವಂತೆ ಮುಂಬೈ ಮೂಲದ ಯುವತಿಯರಿಗೆ ಕಿರಾತಕ ಯೋಗಿಶ್ ಸೂಚಿಸುತ್ತಿದ್ದ. ಆತನ ಮಾತು ಕೇಳುತ್ತಿದ್ದ ಯುವತಿಯರು ಯೋಗಿಶ್ ಹೇಳಿದವರೊಂದಿಗೆ ಹೋಗಲು ರೆಡಿಯಾಗಿದ್ದರು. ಅದರಂತೆ ಶಿವಮೊಗ್ಗ ಮೂಲದ ಗಿರಾಕಿಗಳಾದ ಹರೀಶ್ ಮತ್ತು ಮಂಜುನಾಥ ಬಳಿ ಈ ಯುವತಿಯರನ್ನು ಕಿರಾತಕ ಯೋಗಿಶ್ ಕಳಿಸಿದ್ದಾನೆ. ಈ ವೇಳೆ ಯುವತಿಯರು ಮೊದಲು ಹಣ ನೀಡುವಂತೆ ಗಿರಾಕಿಗಳ ಜೊತೆ ಪಟ್ಟು ಹಿಡಿದಿದ್ದು, ಆದರೆ ತಾವು ಕೆಲಸ ಮುಗಿಸಿದ ಮೇಲೆ ಹಣ ನೀಡುವುದಾಗಿ ಮಂಜುನಾಥ ಮತ್ತು ಹರ್ಷ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ.
ದಾವಣಗೆರೆಯ ವಿದ್ಯಾನಗರದ ಲಾಸ್ಟ್ ಬಸ್ ಸ್ಟಾಪ್‌ನಲ್ಲಿ ಮೊದಲು ಹಣ ನೀಡುವಂತೆ ಗಿರಾಕಿಗಳಾದ ಮಂಜುನಾಥ ಮತ್ತು ಹರ್ಷ ಅವರೊಂದಿಗೆ ಆರಂಭವಾದ ಗಲಾಟೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದ್ದು, ಈ ವೇಳೆ ಯಾರೋ ಪೊಲೀಸರಿಗೆ ಗಲಾಟೆಯ ವಿಷಯದ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ಜಗಳ ಬಿಡಿಸಲು ಮುಂದಾಗಿದ್ದು, ಆಗ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಲಾಟೆ ವೇಳೆ ಓರ್ವ ಲೇಡಿ ಪೊಲೀಸ್ ಕಾನ್ಸಟೇಬಲ್‌ಗೆ ಗಾಯವಾಗಿದ್ದು, ಯುವತಿಯರು ಕುಡಿದ ಮತ್ತಿನಲ್ಲಿ ಇದ್ದರು ಎಂದು ಹೇಳಲಾಗ್ತಿದ್ದು, ಪ್ರಕರಣ ಸಂಬಂಧ ಗಲಾಟೆ ಮಾಡಿದ ನಾಲ್ವರ ಪೈಕಿ ಇಬ್ಬರು ಯುವತಿಯರು ಸೇರಿ ಮಂಜುನಾಥ ಮತ್ತು ಹರ್ಷನನ್ನು ಬಂಧಿಸಲಾಗಿದ್ದು, ಕುಮಾರ್ ನಾಯ್ಕ್ ಎಂಬಾತ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.