ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಕಾರ್ಕಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿ, ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು’ ಎಂದು ಅವರು ಕರೆ ನೀಡಿದ್ದಾರೆ.ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ.
ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ. ಕಾರ್ಕಳದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವದ ಪರ ಮತ್ತು ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.