ವರದಕ್ಷಿಣೆ ಕಿರುಕುಳ: ಮೂರು ತಿಂಗಳ ಗರ್ಭಿಣಿ ಬಲಿ

ಹಾಸನ: ವರದಕ್ಷಿಣೆ  ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿಯಾಗಿರುವ ಘಟನೆ ಹಾಸನ  ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ನಡೆದಿದೆ.

ಮೃತ ಗರ್ಭಿಣಿಯನ್ನು ರೋಹಿಣಿ (23) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಪತಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು  ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್-ಸುಧಾ ದಂಪತಿಯ ಮಗಳು ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನಿಗೆ ಮೇ 28ರಂದು ಕೇರಾಳಪುರದ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250 ಗ್ರಾಂ ಚಿನ್ನ ಇದರ ಜೊತೆಗೆ 20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ಸುಮಂತ್‌ನ ತಂದೆ ಮೃತಪಟ್ಟಿದ್ದರಿಂದ, ತಾಯಿ ಮೀನಾಕ್ಷಿ ಜೊತೆ ಆತ ವಾಸವಿದ್ದನು.
ಮದುವೆಯಾದ ಎರಡು ತಿಂಗಳು ದಂಪತಿ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ 2 ತಿಂಗಳು ಕಳೆಯುತ್ತಿದ್ದಂತೆ ಸುಮಂತ್ ತಾಯಿ ಮೀನಾಕ್ಷಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದರ ಜೊತೆಗೆ ಸುಮಂತ್ ಮದುವೆ ವೇಳೆ ಬ್ಯಾಂಕ್‌‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ ಎಂಬುದು ರೋಹಿಣಿಗೆ ಗೊತ್ತಾಗಿತ್ತು. ಇವರಿಬ್ಬರಲ್ಲದೇ ಸುಮಂತ್ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಕೂಡ ಮನೆಗೆ ಬಂದಾಗಲೆಲ್ಲಾ ರೋಹಿಣಿಗೆ ಚುಚ್ಚು ಮಾತನಾಡುತ್ತಿದ್ದರು.

ಆದರೆ ರೋಹಿಣಿ ಈ ಬಗ್ಗೆ ಎಂದೂ ತನ್ನ ಪೋಷಕರ ಬಳಿ ಹೇಳಿಕೊಂಡಿರಲಿಲ್ಲ. ಆದರೆ ತನ್ನ ಸಹೋದರನಿಗೆ ಮೆಸೇಜ್‌ ಮಾಡಿ ಪತಿ ಸುಮಂತ್‌ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದಳು. ಸುಮಂತ್‌ ರೋಹಿಣಿಗೆ ಯಾವುದಾದರೂ‌ ಫೋನ್ ಬಂದರೆ ಅನುಮಾನದಿಂದ ನೋಡುತ್ತಿದ್ದ. ಅಷ್ಟೇ ಅಲ್ಲದೇ ಪೋಷಕರಿಗೆ ಫೋನ್ ಮಾಡಿದರೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದ ರೋಹಿಣಿಯು, ಸಹೋದರಿಗೆ ನಿನ್ನ ಜೊತೆ ಮಾತನಾಡಬೇಕು, ಇನ್ನೂ ಕೆಲವು ವಿಷಯಗಳನ್ನು ಹೇಳಬೇಕು ಎಂದು ಸಹೋದರನಿಗೆ ಮೆಸೇಜ್‌ ಹಾಕಿದ್ದಳು.

ಆದರೆ ಭಾನುವಾರ ರೋಹಿಣಿ ಹಾಗೂ ಸುಮಂತ್ ದಂಪತಿ, ಸುಶ್ಮಿತಾ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರು ರೈಲಿನಲ್ಲಿ ಹೊರಟಿದ್ದಾರೆ. ಈ ವೇಳೆ ರೋಹಿಣಿ ತಂದೆಗೆ 2 ಬಾರಿ ಕರೆ ಮಾಡಿ ಚೆನ್ನಾಗಿಯೇ ಮಾತನಾಡಿದ್ದಾಳೆ. ದಂಪತಿ ಇಬ್ಬರು ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ಇಳಿದಿದ್ದಾರೆ. ಅದಾದ ಬಳಿಕ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ನಡೆದುಕೊಂಡು ಬಂದಿದ್ದು, ಕೆರೆಯಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ಒಗೆಯುತ್ತಿದ್ದನ್ನು ಕಂಡ ಸುಮಂತ್ ಪತ್ನಿಗೆ ಇಲ್ಲೇ ಇರು ಎಂದು ಹೇಳಿ ಮರೆಯಾಗಿದ್ದಾನೆ. ರೋಹಿಣಿ ಕೆರೆಯ ಬಳಿ ಒಬ್ಬಳೆ ನಿಂತಿದ್ದನ್ನು ಅಲ್ಲಿದ್ದ ಮಹಿಳೆಯರು ನೋಡಿದ್ದಾರೆ. ಇದಾದ ಬಳಿಕ ರೋಹಿಣಿ ನಾಪತ್ತೆಯಾಗಿದ್ದಾಳೆ. ತಂದೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಟವರ್ ಲೊಕೇಷನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆರೆಯ ಬಳಿ ಬಂದು ನೋಡಿದಾಗ ದಡದಲ್ಲಿ 1,760 ರೂ. ಹಣ, ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ರೋಹಿಣಿ ಪೋಷಕರು ಮಾತನಾಡಿ, ಸುಮಂತ್ ತನ್ನ ಮಗಳನ್ನು ಹೊಡೆದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಇದಕ್ಕೆ ಸಾಕ್ಷಿ. ನಮ್ಮ ಮಗಳನ್ನು ಆಕೆಯ ಪತಿ ಸುಮಂತ್ ರೈಲಿನಲ್ಲಿ ಕರೆದುಕೊಂಡು ಬಂದು ಹೊಡೆದು ಕೊಲೆ ಮಾಡಿ ನಂತರ ಕೆರೆಗೆ ತಳ್ಳಿದ್ದಾನೆ ಎಂದು ರೋಹಿಣಿ ಪೋಷಕರು ಆರೋಪಿಸಿದ್ದಾರೆ. ನಮ್ಮ ಮಗಳ ಸಾವಿಗೆ ಸುಮಂತ್, ಮೀನಾಕ್ಷಿ, ಸುಶ್ಮಿತಾ ಹಾಗೂ ಪ್ರಮೋದ್‌ ಕಾರಣ ಇವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

Check Also

ಉಡುಪಿ: ಗೋಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ..!

ಕುಂದಾಪುರ: ಜೂನ್ 25ರಂದು ರಾತ್ರಿ ಶಂಕರನಾರಾಯಣ ಪೇಟೆಯಲ್ಲಿ ನಡೆದ ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೋಲಿಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *

You cannot copy content of this page.