ನವದೆಹಲಿ: ತನ್ನ ಲಿವ್ ಇನ್ ಸಂಗಾತಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದ ಶ್ರದ್ದಾ ವಾಲ್ಕರ್ ತಲೆ ಬುರುಡೆ ಭಾಗಗಳು ದಿಲ್ಲಿಯ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾಗಿವೆ. ಶ್ರದ್ದಾಳನ್ನು ಹತ್ಯೆಗೈದ ಬಳಿಕ ಆರೋಪಿ ಅಫ್ತಾಬ್ ಆಕೆಯ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಬಳಿಕ ಪೊಲೀಸರು ವಿಚಾರಣೆ ವೇಳೆ ಆತ ದೇಹವನ್ನು ತುಂಡು ತುಂಡಾಗಿ ಎಸೆದಿದ್ದ ಅರಣ್ಯಕ್ಕೆ ಆತನನ್ನು ಕರೆದೊಯ್ದಿದ್ದರು. ಈ ವೇಳೆ ವಿವಿಧ ಭಾಗಗಳು ಪತ್ತೆಯಾಗಿದ್ದವು. ಆದರೆ ತಲೆಬುರುಡೆ ಸಿಕ್ಕಿರಲಿಲ್ಲ. ಇದೀಗ ತಲೆ ಬುರುಡೆಯೂ ಪತ್ತೆಯಾಗಿದೆ.
ಇನ್ನು ಜೂನ್‌ನಲ್ಲಿ ಆತ ಮುಂಬೈನಿಂದ ಫ್ರಡ್ಜ್, ಪಾತ್ರೆ, ಗೃಹ ಬಳಕೆ ವಸ್ತುಗಳು ಮತ್ತು 20 ಸಾವಿರ ರೂ. ಮೌಲ್ಯದ ಬಟ್ಟೆಗಳನ್ನು ದೆಹಲಿ ಅಡ್ರೆಸ್‌ಗೆ ಕೊರಿಯರ್ ಮೂಲಕ ತರಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಗುಡ್ ಲಕ್ ಪ್ಯಾಕರ್‍ಸ್ ಹಾಗೂ ಮೂವರ್‍ಸ್ ಕಂಪೆನಿ ಮಾಲಕರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಇಬ್ಬರು ವಾಸವಾಗಿದ್ದ ಬಾಡಿಗೆ ಫ್ಲಾಟ್‌ನ್ನೂ ಶೋಧ ನಡೆಸಿದ್ದು, ಫ್ಲಾಟ್‌ನಲ್ಲಿ ಎರಡು ಬ್ಯಾಗ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ.
ಈ ನಡುವೆ ಶ್ರದ್ದಾ ವಾಲ್ಕರ್ ಹತ್ಯೆ ಪ್ರಕರಣವನ್ನು ದೆಹಲಿ ಪೊಲೀಸರಿಂದ ಸಿಬಿಐ ತನಿಖೆಗೆ ವರ್ಗಾವಯಿಸಬೇಕೆಂದು ಕೋರಿ ನ್ಯಾಯವಾದಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.