ಉಡುಪಿ : ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಡುಪಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಬ್ರಹ್ಮಾವರ ತಾಲೂಕಿನ ರಿಕ್ಷಾ ಚಾಲಕ ಕೇಶವ ನಾಯ್ಕ (27) ಶಿಕ್ಷೆಗೆ ಗುರಿಯಾಗಿರುವ ಆರೋಪಿ ಎಂದು ಮಾಹಿತಿ ದೊರಕಿದೆ.

 

13 ವರ್ಷದ ನೊಂದ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದು, ಇದರಿಂದ ಆತ ಬಾಲಕಿಯ ಮನೆಯವರಿಗೂ ಪರಿಚಯಸ್ಥನಾಗಿದ್ದ ಎನ್ನಲಾಗಿದೆ.ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಆತ, 2023ರ ಫೆಬ್ರವರಿ 17ರಂದು ಆಕೆಯನ್ನು ಪುಸಲಾಯಿಸಿ ತನ್ನ ರಿಕ್ಷಾದಲ್ಲಿ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಲ್ಲೂ ಹೇಳಬಾರದೆಂದು ಹೆದರಿಸಿದ್ದನು. ಆಕೆ ಗರ್ಭವತಿಯಾದ ಬಳಿಕ ಹೆತ್ತವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. 28 ಸಾಕ್ಷಿಗಳ ಪೈಕಿ ಅಭಿಯೋಜನೆ ಪರವಾಗಿ 16 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿತು. ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿ ದೋಷಿ ಎಂದು ಪರಿಗಣಿಸಿ ಅತ್ಯಾಚಾರ ಎಸಗಿರುವುದಕ್ಕೆ 20 ವರ್ಷಗಳ ಕಠಿನ ಜೈಲುಶಿಕ್ಷೆ ಮತ್ತು 20 ಸಾವಿರ ರೂ. ದಂಡ, ಬಾಲಕಿಯನ್ನು ಆಕೆಯ ಹೆತ್ತವರಿಗೆ ಗೊತ್ತಿಲ್ಲದೇ ಪುಸಲಾಯಿಸಿ ಕರೆದುಕೊಂಡು ಹೋಗಿರುವುದಕ್ಕೆ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ಬಾಲಕಿಗೆ ಬೆದರಿಕೆ ಹಾಕಿರುವುದಕ್ಕೆ ಒಂದು ವರ್ಷ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದರು. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳ ಶಿಕ್ಷೆ ಮತ್ತು ನೊಂದ ಬಾಲಕಿಗೆ ಪರಿಹಾರವಾಗಿ ಸರಕಾರದಿಂದ 3 ಲಕ್ಷ ರೂ. ನೀಡಬೇಕೆಂದು ನ್ಯಾಯಾಲಯ ಆದೇಶಿಸಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರಾಗಿದೆ.

Check Also

ಉಡುಪಿ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಪೀಠಗಳಲ್ಲೊಂದಾದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ …

Leave a Reply

Your email address will not be published. Required fields are marked *

You cannot copy content of this page.