May 14, 2026
image - 2026-05-14T085255.991
ಮಂಗಳೂರು:  ಅಮೆರಿಕದ ಪ್ರತಿಷ್ಠಿತ ‘ಪ್ರಿನ್ಸೆಸ್ ಕ್ರೂಸ್ ಲೈನ್ಸ್’ ಹಡಗಿನಲ್ಲಿ ಬಾರ್ಟೆಂಡರ್ ಕೆಲಸ ಕೊಡಿಸುವುದಾಗಿ ನಂಬಿಸಿ ನಗರದ 21 ವರ್ಷದ ಯುವತಿಯೊಬ್ಬರಿಗೆ ಸೈಬರ್ ಚೋರರು ಬರೋಬ್ಬರಿ ₹4,12,850 ವಂಚಿಸಿದ್ದಾರೆ. ಪಿರ್ಯಾದಿದಾರ ಯುವತಿಯು ಏಪ್ರಿಲ್ 13ರಂದು ಇನ್‌ಸ್ಟಾಗ್ರಾಮ್ ವೀಕ್ಷಿಸುತ್ತಿದ್ದಾಗ ‘Recruiting Agency’ ಹೆಸರಿನ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದನ್ನು ಕ್ಲಿಕ್ ಮಾಡಿದ ಕೂಡಲೇ ಅಪರಿಚಿತ ವಾಟ್ಸಾಪ್ ನಂಬರ್‌ನಿಂದ ಸಂದೇಶ ಬಂದಿದೆ. ತನ್ನನ್ನು ಕ್ಯಾಲಿಫೋರ್ನಿಯಾದ ಹೈರಿಂಗ್ ಮ್ಯಾನೇಜರ್ ‘ಜಾನಿ ಫೆವೆಲೆನ್’ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹಡಗಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಹಂತ ಹಂತವಾಗಿ ಹಣ ವಸೂಲಿ: ನಂತರ ನೋಂದಣಿ ಶುಲ್ಕ, ವರ್ಕ್ ಪರ್ಮಿಟ್, ಐಇಎಲ್‌ಟಿಎಸ್ (IELTS) ಪರೀಕ್ಷೆ ಮತ್ತು ವೀಸಾ ಪ್ರಕ್ರಿಯೆಯ ನೆಪವೊಡ್ಡಿ ಯುವತಿಯಿಂದ ಹಂತ ಹಂತವಾಗಿ ಹಣ ಪೀಕಲಾಗಿದೆ. ಏಪ್ರಿಲ್ 14 ರಿಂದ ಮೇ 8 ರವರೆಗೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಕ್ಯೂಆರ್ ಕೋಡ್‌ಗಳ (QR Code) ಮೂಲಕ ಒಟ್ಟು ₹4,12,850 ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ವೀಸಾ ಪ್ರಕ್ರಿಯೆ ಹೆಸರಿನಲ್ಲಿ ಮೇಲ್ ಮತ್ತು ಟೆಲಿಗ್ರಾಂ ಐಡಿಗಳನ್ನು ಬಳಸಿಕೊಂಡು ಯುವತಿಯ ವಿಶ್ವಾಸ ಗಳಿಸಿದ್ದ ವಂಚಕರು, ಕೊನೆಗೆ ಯಾವುದೇ ಕೆಲಸವನ್ನೂ ಕೊಡಿಸದೆ ಕೈಕೊಟ್ಟಿದ್ದಾರೆ. ಹಣ ಕಳೆದುಕೊಂಡಿರುವುದು ಮನವರಿಕೆಯಾಗುತ್ತಿದ್ದಂತೆಯೇ ಯುವತಿಯು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.