

ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಇಂದು ಉಚ್ಚಿಲದ ಶ್ರೀ ಗಿರಿಜಾ ದೋಣಿಯಲ್ಲಿ 7 ಮಂದಿ ಮೀನುಗಾರಿಕೆಗೆಂದು ತೆರಳಿದ್ದರು. ಚಂಡಮಾರುತದ ಪ್ರಭಾವದಿಂದಾಗಿ ಸಮುದ್ರ ಪ್ರಕ್ಷುಬ್ದಗೊಂಡು ದೋಣಿ ಮುಳುಗಿತ್ತು. ಈ ವೇಳೆ ದೋಣಿಯಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿದ್ದ ಬಲೆ ಹಾಗೂ ಹೈ ಸ್ಪೀಡ್ ಇಂಜಿನ್ ಸಮುದ್ರ ಪಾಲಾಗಿದ್ದು, ದೋಣಿಗೆ ಹಾನಿ ಉಂಟಾಗಿದೆ. ಘಟನೆಯಲ್ಲಿ ಸುಮಾರು ಆರೂವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಾಲೀಕರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.